ಪಾಕಿಸ್ತಾನ: ಕ್ವೆಟ್ಟಾದ ಶಹರಾ-ಎ-ಇಕ್ಬಾಲ್ ಪ್ರದೇಶದಲ್ಲಿ ಪೊಲೀಸ್ ವಾಹನದ ಬಳಿ ಸ್ಫೋಟ ಸಂಭವಿಸಿದ ಪರಿಣಾಮ ಇಬ್ಬರು ಪೊಲೀಸರು ಮತ್ತು ಅಪ್ರಾಪ್ತ ಬಾಲಕಿ ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದು, 19 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ.
ಸ್ಫೋಟದಿಂದಾಗಿ ಈ ಪ್ರದೇಶದಲ್ಲಿ ಹಲವಾರು ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಹಾನಿಗೊಳಗಾಗಿವೆ. ಗಾಯಾಳುಗಳನ್ನು ಸಮೀಪದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಂಗಾಮಿ ಪೊಲೀಸ್ ತನಿಖಾ ಅಧೀಕ್ಷಕರ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ. ಕ್ವೆಟ್ಟಾದ ಕಂದಹರಿ ಬಜಾರ್ನಲ್ಲಿ ವಾಹನವನ್ನು ನಿಲ್ಲಿಸಲಾಗಿದ್ದು ಈ ವೇಳೆ ಸ್ಫೋಟ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶಫ್ಕತ್ ಹೇಳಿದ್ದಾರೆ.
ಪೊಲೀಸ್ ವಾಹನದ ಹಿಂಭಾಗ ನಿಲ್ಲಿಸಲಾಗಿದ್ದು ಮೋಟಾರ್ ಸೈಕಲ್ ನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಅಳವಡಿಸಿ ಸ್ಫೋಟ ನಡೆಸಲಾಗಿದೆ. ಸ್ಫೋಟಕ್ಕೆ ಮೂರರಿಂದ ನಾಲ್ಕು ಕಿಲೋ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಲೂಚಿಸ್ತಾನದ ರಾಜಧಾನಿಯಲ್ಲಿ ನಡೆದ ಸ್ಫೋಟವನ್ನು ಖಂಡಿಸಿ ಘಟನೆಯಲ್ಲಿ ಮೃತಪಟ್ಟವರಿಗಾಗಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.