ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 15ನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಕೇವಲ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿತು. ಗೆಲುವಿನ ಬಳಿಕ ಮೈದಾನಕ್ಕಿಳಿದ ಲಖನೌ ತಂಡದ ಮೆಂಟರ್, ಆರ್ಸಿಬಿ ಅಭಿಮಾನಿಗಳತ್ತ ಮುಖ ಮಾಡಿ ಸೆಲೆನ್ಸ್ ಎಂದು ಕೈ ಸನ್ನೆ ಮಾಡಿದ್ದಾರೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡಕ್ಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತವರು ಮೈದಾನವಾಗಿದೆ. ಹಾಗಾಗಿ ಈ ಮೈದಾನದಲ್ಲಿ ಪಂದ್ಯ ನಡೆದಾಗಲೆಲ್ಲಾ ಸಾವಿರಾರು ಅಭಿಮಾನಿಗಳು ಇಲ್ಲಿಗೆ ಬಂದು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುವುದು ಸಾಮಾನ್ಯ. ಅದೇ ರೀತಿ ಸೋಮವಾರ ನಡೆದಿದ್ದ ಪಂದ್ಯದಲ್ಲಿಯೂ ಭರ್ತಿಯಾಗಿದ್ದ ಮೈದಾನದಲ್ಲಿ ಆರ್ಸಿಬಿ…ಆರ್ಸಿಬಿ.. ಎಂದು ಕೂಗುತ್ತು ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬೆಂಲಿಸುತ್ತಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ತಂಡ ಪ್ರಥಮ ಇನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿತ್ತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ ಅವರು ಅರ್ಧಶತಕಗಳನ್ನು ಸಿಡಿಸಿದ್ದರು. ಈ ಮೂವರು ಬ್ಯಾಟ್ಸ್ಮನ್ಗಳ ಸ್ಪೋಟಕ ಬ್ಯಾಟಿಂಗ್ ಅನ್ನು ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಆನಂದಿಸಿದ್ದರು.
ನಂತರ 213 ರನ್ ಗುರಿ ಹಿಂಬಾಲಿಸಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ ಕೇವಲ 23 ರನ್ಗಳಿಗೆ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಈ ವೇಳೆ ಅಭಿಮಾನಿಗಳು ಆರ್ಸಿಬಿ….ಆರ್ಸಿಬಿ ಎಂಬ ಕೂಗು ಇಡೀ ಮೈದಾನದಲ್ಲಿ ಆವರಿಸಿತ್ತು. ಈ ವೇಳೆ ಸಪ್ಪೆ ಮುಖ ಹಾಕಿಕೊಂಡು ಗೌತಮ್ ಗಂಭೀರ್ ಡಗ್ಔಟ್ನಲ್ಲಿ ಕುಳಿತಿದ್ದರು.
ಆದರೆ, ಮಾರ್ಕಸ್ ಸ್ಟೋಯ್ನಿಸ್ ಅವರು ಕ್ರೀಸ್ಗೆ ಬರುತ್ತಿದ್ದಂತೆ ಪಂದ್ಯದ ದಿಕ್ಕು ಲಖನೌ ಸೂಪರ್ ಜಯಂಟ್ಸ್ನತ್ತ ತಿರುಗಿತು. ಕೇವಲ 30 ಎಸೆತಗಳಲ್ಲಿ ಸ್ಟೋಯ್ನಿಸ್ 65 ರನ್ ಸಿಡಿಸಿ ಲಖನೌ ತಂಡವನ್ನು ಮೇಲೆತ್ತಿದರು. ಸ್ಟೋಯ್ನಿಸ್ ಔಟ್ ಆದ ಬಳಿಕ, ಆರ್ಸಿಬಿ ಅಭಿಮಾನಿಗಳ ಘರ್ಜನೆ ಮೈದಾನದಲ್ಲಿ ಇನ್ನಷ್ಟು ಜಾಸ್ತಿ ಆಯಿತು. ಆದರೆ, ಆರ್ಸಿಬಿ ಅಭಿಮಾನಿಗಳ ಈ ಸಂತೋಷ ಜಾಸ್ತಿ ಹೊತ್ತು ಇರಲಿಲ್ಲ.