ಬೆಂಗಳೂರು: ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದ ಆರೋಪದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಇಂಡಿಯನ್ಮನಿ ಫ್ರೀಡಂ ಆ್ಯಪ್ (Indian money freedom app) ಸಿಇಒ ಸಿಎಸ್ ಸುಧೀರ್ಗೆ (CS Sudheer) ಬನಶಂಕರಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸುಧೀರ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ 3 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಸುಧೀರ್ ಮತ್ತವರ ತಂಡದ ವಿರುದ್ಧ ನಯನಾ ಎಂಬ ಮಹಿಳೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಮಧ್ಯೆ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮೊರೆ ಹೋಗಿರುವ ಸುಧೀರ್ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹೀಗಾಗಿ ಅವರು ಬಂಧನ ಭೀತಿಯಿಂದ ಬಚಾವಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.