ಕನ್ನಡದ ಹೆಸರಾಂತ ನಟ ಕಿಚ್ಚ (Kiccha) ಸುದೀಪ್ (Sudeep) ಅವರಿಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಗನ್ ಮ್ಯಾನ್ (Gunman) ನೀಡುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲು ಜಾಕ್ ಮಂಜು (Jack Manju) ತೆರಳಿದ್ದರು ಎಂದು ಗೊತ್ತಾಗಿದೆ. ಪೊಲೀಸ್ ಅಧಿಕಾರಿಗಳು ಮೀಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಅವರು ವಾಪಸ್ಸಾಗಿದ್ದಾರಂತೆ. ಈ ನಡುವೆ ಖಾಸಗಿ ವಿಡಿಯೋ (private video) ಬೆದರಿಕೆಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡದಂತೆ ಕೋರ್ಟಿಗೆ ಮಂಜು ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.
ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸುವ ದಿನವೇ ಖಾಸಗಿ ವಿಡಿಯೋಗೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಮಂಜು ದೂರು ನೀಡಿದ್ದರು. ಸುದೀಪ್ ಅವರ ಹೆಸರಿನಲ್ಲಿ ಎರಡು ಪತ್ರಗಳು ಬಂದಿದ್ದು, ಮಾನಹಾನಿ ಮಾಡುವಂತಹ ಕೆಲಸಕ್ಕೆ ಪತ್ರ ಬರೆದವರು ಕೈ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು.
ಪತ್ರಗಳ ಗಂಭೀರತೆಯನ್ನು ಅರಿತ ಪುಟ್ಟೇನಹಳ್ಳಿ ಪೊಲೀಸರು ಆ ದೂರನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಸದ್ಯ ಸಿಸಿಬಿ ಪತ್ರಗಳ ಬರೆದವರ ಹಿಂದೆ ಬಿದ್ದಿದೆ. ಆ ಪತ್ರಗಳು ಎಲ್ಲಿಂದ ಬಂದಿವೆ, ಯಾರು ಬರೆದದ್ದು, ಯಾವ ಉದ್ದೇಶದಿಂದ ಬರೆಯಲಾಗಿದೆ ಎಂಬಿತ್ಯಾದಿ ವಿವರಗಳನ್ನು ಸಿಸಿಬಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ಪತ್ರದ ಕುರಿತಂತೆ ಹಲವು ವಿವರಗಳು ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ.
ಪತ್ರಗಳ ಕುರಿತಂತೆ ದೂರು ದಾಖಲಾದ ದಿನವೇ ಸುದೀಪ್ ಮಾಧ್ಯಮಗಳ ಜೊತೆ ಮಾತನಾಡಿ, ‘ಆ ಪತ್ರದ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ. ಸಿನಿಮಾ ಇಂಡಸ್ಟ್ರಿಯವರೇ ಈ ಕೃತ್ಯದ ಹಿಂದೆ ಇದ್ದಾರೆ. ಅವರಿಗೆ ಕಾನೂನು ಮೂಲಕವೇ ಉತ್ತರಿಸುತ್ತೇನೆ’ ಎಂದು ತಿಳಿಸಿದ್ದರು.