ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಕಣಕ್ಕಿಳಿಯಲು ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ಆಕಾಂಕ್ಷಿಗಳಾಗಿದ್ದು, ಈ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ತಮ್ಮ ಆಪ್ತ ಮಹೇಶ್ ಕುಮಟಳ್ಳಿ(Mahesh Kumathalli) ಅವರಿಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದು, ಲಕ್ಷ್ಮಣ ಸವದಿ ಕೂಡ ಟಿಕೆಟ್ ಗಾಗಿ ಒತ್ತಡ ಹೇರುತ್ತಿದ್ದಾರೆ. ಇದರ ಮಧ್ಯೆ ಮಹೇಶ್ ಕುಮಟಳ್ಳಿಯವರಿಗೇ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ((Laxman Savadi) ಅವರನ್ನು ಕಾಂಗ್ರೆಸ್ನ ಪ್ರಮುಖ ನಾಯಕರು ಸಂಪರ್ಕ ಮಾಡಿದ್ದು, ಪಕ್ಷಕ್ಕೆ ಸೆಳೆಯಲು ನಿರಂತರ ಕಸರತ್ತು ನಡೆಸಿದ್ದಾರೆ. ಈಗಾಗಲೇ ಸವದಿ ಸಹ ಕೊಪ್ಪಳ ಕಾಂಗ್ರೆಸ್ ಶಾಸಕರೊಬ್ಬ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೋನಿಯಾ, ರಾಹುಲ್ ಸಮ್ಮುಖದಲ್ಲೇ ಲಕ್ಷ್ಮಣ ಸವದಿ ಅವರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿದ್ದಾರೆ. ಇತ್ತ ಸವದಿ ಸಹ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಾಯುತ್ತಿದ್ದಾರೆ. ಒಂದು ವೇಳೆ ಪಟ್ಟಿಯಲ್ಲಿ ತಮಗೆ ಬದಲಿಗೆ ಮಹೇಶ್ ಕುಮಟಳ್ಳಿ ಟಿಕೆಟ್ ನೀಡಿದ್ದಲ್ಲಿ ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗಿದೆ. ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಅಥಣಿ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸಿದೇ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಇನ್ನು ಚನ್ನಪಟ್ಟಣಕ್ಕೆ ಸಿ.ಪಿ.ಯೋಗೇಶ್ವರ್ ಅವರನ್ನು ಸಹ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೇ ನಿನ್ನೆ (ಏಪ್ರಿಲ್ 10) ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲೂ ಸಹ ಅಥಣಿ ಕ್ಷೇತ್ರವನ್ನು ಪೆಂಡಿಂಗ್ ಇಡಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ ವಲಸಿಗ ಶಾಸಕರು ಹಾಗೂ ಮೂಲ ಬಿಜೆಪಿಗರ ನಡುವಿನ ತಿಕ್ಕಾಟ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಭುಗಿಲೆದ್ದಿದೆ. ಬೆಳಗಾವಿ (Belegavi) ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ವಲಸಿಗ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಟಿಕೆಟ್ ನೀಡಬೇಡಿ ನನಗೆ ನೀಡಬೇಕು ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ಹಠಕ್ಕೆ ಬಿದ್ದಿದ್ದಾರೆ.
ಕ್ಷೇತ್ರದಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದೆ. ಜೈನರು, ಕುರುಬರು, ಮಸ್ಲೀಮರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಕುಮಟಳ್ಳಿ ಎದುರು ಗಾಣಿಗ ಸಮಾಜದ ಲಕ್ಷ್ಮಣ ಸವದಿ ಜಾತಿ ಬಲ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದ ಮಹೇಶ್ ಕುಮಟಳ್ಳಿ ಅವರ ವೋಟ್ ಬ್ಯಾಂಕ್ ಮೇಲೆ ಸವದಿ ಕಣ್ಣಿಟ್ಟು ಪಂಚಮಸಾಲಿ ಮುಖಂಡರನ್ನು ಸೆಳೆಯಲು ಮುಂದಾಗಿದ್ದಾರೆ. ಒಂದು ಕಡೆ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲನ್ನು ಗೋಕಾಕ್ ಸಾಹುಕಾರ ಕುಮಟಳ್ಳಿ ಪರ ಬ್ಯಾಟ್ ಬೀಸಿದರೆ ಮತ್ತೊಂದೆಡೆ ಬಿಜೆಪಿ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆಗೆ ಬರುವಂತೆ ಕಾರ್ಯಕರ್ತರಿಗೆ ಸವದಿ ಕರೆ ಕೊಡುತ್ತಿದ್ದಾರೆ.