ಬೆಂಗಳೂರು: ರಾಜಧಾನಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಕಮಲ ಪಾಳಯವು ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಈ ಬಾರಿ ಮಾಜಿ ಕಾರ್ಪೊರೇಟರ್ಗಳು ಹಾಗೂ ಹೊಸ ಮುಖಗಳಿಗೆ ಮಣೆ ಹಾಕಿದೆ. ಟಿಕೆಟ್ ವಂಚಿತ ಆಕಾಂಕ್ಷಿಗಳು ಕುದಿಯುತ್ತಿದ್ದು, ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ.
ಬಿಜೆಪಿಯು ನಗರದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಹಾಲಿ ಶಾಸಕ ಅರವಿಂದ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ, ಸಚಿವ ವಿ.ಸೋಮಣ್ಣ ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಮತ್ತು ಹೆಬ್ಬಾಳ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಚುನಾವಣೆಯಲ್ಲಿಐದು ಮಂದಿ ಮಾಜಿ ಕಾರ್ಪೊರೇಟರ್ಗಳಿಗೆ ವಿಧಾನಸೌಧದ ಮೆಟ್ಟಿಲೇರಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅವರನ್ನು ಚಾಮರಾಜಪೇಟೆ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ರಾಜಾಜಿನಗರ, ಬಸವನಗುಡಿ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ, ಬೇರೆಯವರನ್ನು ಕಣಕ್ಕಿಳಿಸಲಾಗುತ್ತದೆ. ಹಾಗೆಯೇ, ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂಅಭ್ಯರ್ಥಿಗಳನ್ನು ಬದಲಿಸಲಾಗುತ್ತದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಜೆಪಿ ವರಿಷ್ಠರು, ವಿ.ಸೋಮಣ್ಣ ಹೊರತುಪಡಿಸಿ, ಉಳಿದ ಹಾಲಿ ಶಾಸಕರಿಗೇ ಮತ್ತೆ ಟಿಕೆಟ್ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದವರಿಗೆ ಮತ್ತೆ ಅದೇ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಿಸಲಾಗಿದೆ.
ಕಾಂಗ್ರೆಸ್ ಪ್ರಾಬಲ್ಯವಿರುವ ಬ್ಯಾಟರಾಯನಪುರ, ಬಿಟಿಎಂ ಲೇಔಟ್, ಸರ್ವಜ್ಞನಗರ ಸೇರಿದಂತೆ ಉಳಿದ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಚಿಂತಿಸಿದ್ದರು. ಮೂರ್ನಾಲ್ಕು ಬಾರಿ ಒಂದೇ ಕ್ಷೇತ್ರದಲ್ಲಿ ಗೆದ್ದವರು, ಬಿಜೆಪಿಯಿಂದ ಕ್ಷೇತ್ರ ಕೈ ತಪ್ಪುವುದಿಲ್ಲವೆಂಬ ಖಾತ್ರಿ ಇರುವ ಕ್ಷೇತ್ರದ ಹಾಲಿ ಶಾಸಕರನ್ನೇ ಕಾಂಗ್ರೆಸ್ನ ಪ್ರಮುಖ ನಾಯಕರ ವಿರುದ್ಧ ಸ್ಪರ್ಧೆಗಿಳಿಸಲಿದ್ದಾರೆ ಎನ್ನಲಾಗಿತ್ತು. ಇದೆಲ್ಲವೂ ಹುಸಿಯಾಗಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ವಿಧಾನ ಪರಿಷತ್ನ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ನಡುವೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ, ಬಿಜೆಪಿ ನಾಯಕರಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿಆರ್.ಅಶೋಕ್ ಅವರ ಸಂಬಂಧಿ ಎ.ರವಿ, ಕೆ.ಎನ್.ಚಕ್ರಪಾಣಿ ಮತ್ತು ತಮ್ಮೇಶ್ಗೌಡ ತೀವ್ರ ಲಾಬಿ ನಡೆಸಿದ್ದರು. ಮೂವರು ಆಕಾಂಕ್ಷಿಗಳ ನಡುವಿನ ಹಣಾಹಣಿಯಲ್ಲಿ ಬಿ.ವೈ.ವಿಜಯೇಂದ್ರ ಆಪ್ತ ತಮ್ಮೇಶ್ ಗೌಡ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
5 ಮಂದಿ ಮಾಜಿ ಕಾರ್ಪೊರೇಟರ್ಗಳಿಗೆ ಅದೃಷ್ಟ:
2018ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದ ಮಾಜಿ ಕಾರ್ಪೊರೇಟರ್ ಎಚ್.ರವೀಂದ್ರ ಅವರು ಟಿಕೆಟ್ ದಕ್ಕಿಸಿಕೊಂಡಿದ್ದಾರೆ. ಇದೇ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಕಾರ್ಪೊರೇಟರ್ ಕೆ.ಉಮೇಶ್ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪಿದೆ.
ಹಾಗೆಯೇ, ಸರ್ವಜ್ಞನಗರ ಕ್ಷೇತ್ರದಲ್ಲಿ ಮಾಜಿ ಕಾರ್ಪೊರೇಟರ್ ಪದ್ಮನಾಭ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ. ಈ ಹಿಂದೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಶಿವಾಜಿನಗರ ಕ್ಷೇತ್ರದಿಂದ ಮಾಜಿ ಕಾರ್ಪೊರೇಟರ್ ಎನ್.ಚಂದ್ರ, ಶಾಂತಿನಗರ ಕ್ಷೇತ್ರಕ್ಕೆ ಕೆ.ಶಿವಕುಮಾರ್ ಹಾಗೂ ಜಯನಗರ ಕ್ಷೇತ್ರದಲ್ಲಿ ಮಾಜಿ ಕಾರ್ಪೊರೇಟರ್ ಸಿ.ಕೆ.ರಾಮಮೂರ್ತಿ ಅವರಿಗೆ ಬಿಜೆಪಿ ಟಿಕೆಟ್ ಲಭಿಸಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಜಯನಗರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕಾಂಗ್ರೆಸ್ನ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿ ವಿರುದ್ಧ ಸ್ಪರ್ಧಿಸಲು ಅನಿಲ್ ಶೆಟ್ಟಿ ತುಂಬಾ ಉತ್ಸುಕರಾಗಿದ್ದರು. ಆದರೆ, ಕಮಲ ಪಾಳಯವು ಶ್ರೀಧರ್ ರೆಡ್ಡಿ ಎಂಬುವರಿಗೆ ಟಿಕೆಟ್ ನೀಡಿದ್ದು, ಅನಿಲ್ ಶೆಟ್ಟಿ ಆಸೆಗೆ ತಣ್ಣೀರೆರಚಿದೆ. ಪುಲಿಕೇಶಿನಗರ ಕ್ಷೇತ್ರದಲ್ಲಿ ಮುರಳಿ, ಗಾಂಧಿನಗರ ಕ್ಷೇತ್ರದಲ್ಲಿಮಾಜಿ ಸಚಿವ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಆನೇಕಲ್ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ಅವರಿಗೆ ಟಿಕೆಟ್ ಕೈತಪ್ಪಿದೆ. ಇಲ್ಲಿ ಹೊಸಮುಖ ಹುಲ್ಲಳ್ಳಿ ಶ್ರೀನಿವಾಸ್ ಅವರಿಗೆ ಮಣೆ ಹಾಕಲಾಗಿದೆ.
ಭಾಸ್ಕರ ರಾವ್ಗೆ ಜಾಕ್ಪಾಟ್:
ಚುನಾವಣೆ ಹೊಸ್ತಿಲಲ್ಲಿ ಆಪ್ ತೊರೆದು ಕಮಲ ಪಾಳಯ ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರಿಗೆ ಅದೃಷ್ಟ ಖುಲಾಯಿಸಿದೆ. ಬಸವನಗುಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ದಕ್ಕಿದೆ.
ಪ್ರಬಲ ಆಕಾಂಕ್ಷಿಗಳಿಗೆ ನಿರಾಸೆ:
ನಗರದ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಪ್ರಬಲ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್, ಮಾಜಿ ಕಾರ್ಪೊರೇಟರ್ ಕೆ.ಉಮೇಶ್ ಶೆಟ್ಟಿ, ಮುಖಂಡ ಅನಿಲ್ ಶೆಟ್ಟಿ ಸೇರಿದಂತೆ ಹಲವರಿಗೆ ಟಿಕೆಟ್ ಕೈತಪ್ಪಿದೆ.