ಬಿಜೆಪಿ ಟಿಕೆಟ್ ಹಂಚಿಕೆ ಇದೀಗ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದ ಒಳಗಾದ್ರೂ ಟಿಕೆಟ್ ಹಂಚಿಕೆ ಆಗಲಿ ಅಂತಾ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹಾತೊರೆಯುತ್ತಿದ್ದಾರೆ. ಹಲವು ಸುತ್ತಿನ ಮಾತುಕತೆಗಳು, ಸಂಧಾನ, ಚರ್ಚೆ ಎಲ್ಲವೂ ನಡೆಯುತ್ತಲೇ ಇವೆ. ಇಡೀ ರಾಜ್ಯದ ಟಿಕೆಟ್ ಹಂಚಿಕೆಯ ತಲೆ ನೋವು ಒಂದು ಕಡೆಯಾದ್ರೆ, ಬೆಳಗಾವಿಯಲ್ಲಿ ಟಿಕೆಟ್ ಹಂಚಿಕೆ ಮಾಡೋದೆ ಬಿಜೆಪಿಗೆ ಸವಾಲಾಗಿಬಿಟ್ಟಿದೆ. ಯಾಕಂದ್ರೆ, ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರಿಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸೋದೇ ಪ್ರತಿಷ್ಠೆಯ ವಿಷಯ!
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಈ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಅಂತಿಮ ಮಾಡೋದೇ ಪಕ್ಷದ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ಅಭ್ಯರ್ಥಿಗಳನ್ನ ಅಂತಿಮಗೊಳಿಸುವ ಕಾರ್ಯ ವಿಧಾನವೇ ಅತಂತ್ರ ಸ್ಥಿತಿ ತಲುಪಿದೆ. ಈ ವಿಚಾರವಾಗಿ ಸಿಎಂ ಬೊಮ್ಮಾಯಿ ಹಾಗೂ ಅವರ 22 ಸದಸ್ಯರ ಕೋರ್ ಕಮಿಟಿ ಮೇಲಿಂದ ಮೇಲೆ ಸಭೆಗಳನ್ನ ನಡೆಸಿದೆ. ಆದ್ರೂ ಕೂಡಾ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಬಗೆಹರಿದಿಲ್ಲ. ಇದಕ್ಕೆ ಪ್ರಮುಖ ಕಾರಣ, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿಯಂಥಾ ನಾಯಕರ ಪ್ರತಿಷ್ಠೆಯ ಫೈಟ್.. ತಮ್ಮ ತಮ್ಮ ಬೆಂಬಲಿಗರಿಗೇ ಟಿಕೆಟ್ ನೀಡುವಂತೆ ಈ ನಾಯಕರು ಹೈಕಮಾಂಡ್ಗೆ ಒತ್ತಡ ಹೇರ್ತಿದ್ಧಾರೆ. ಒಂದು ಹಂತದಲ್ಲಿ ಈ ನಾಯಕರಿಗೆ ಟಿಕೆಟ್ ಹಂಚಿಕೆ ವಿಚಾರ ತೃಪ್ತಿ ತರದಿದ್ದರೆ ಬಂಡಾಯದ ಬಾವುಟ ಹಾರಿಸುವ ಭೀತಿ ಕೂಡಾ ಇದೆ.
ರಮೇಶ್ ಜಾರಕಿಹೊಳಿ ವಾದವೇನು?
ಬೆಳಗಾವಿ ಜಿಲ್ಲೆಯ ಎಲ್ಲಾ 18 ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾನು ಹೇಳಿದ್ದೇ ನಡೆಯಬೇಕು ಅನ್ನೋದು ರಮೇಶ್ ಜಾರಕಿಹೊಳಿ ಆಗ್ರಹ. ನಾನು ಹೇಳಿದವರಿಗೇ ಟಿಕೆಟ್ ಕೊಡಿ, ಪಕ್ಷದ ಪ್ರಚಾರದ ಉಸ್ತುವಾರಿಯನ್ನೂ ಕೊಡಿ, ಜಿಲ್ಲೆಯ ಎಲ್ಲಾ 18 ಸ್ಥಾನಗಳ ನಿರ್ವಹಣೆಯ ಅಧಿಕಾರ ನನಗೇ ಕೊಡಿ ಅನ್ನೋದು ರಮೇಶ್ ಜಾರಕಿಹೊಳಿ ಅವರ ಒತ್ತಾಯ. ಎಲ್ಲಕ್ಕಿಂತಾ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಬೇಕು, ಒಂದು ಕ್ಷೇತ್ರದ ಟಿಕೆಟ್ ತಮಗೆ ಕೊಡಬೇಕು ಅನ್ನೋ ಬೇಡಿಕೆಯ ಪಟ್ಟಿಯನ್ನ ರಮೇಶ್ ಜಾರಕಿಹೊಳಿ ಬಿಜೆಪಿ ವರಿಷ್ಠರ ಮುಂದಿಟ್ಟಿದ್ದಾರೆ. ಆದ್ರೆ, ಈ ಹಂತದಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಸವಾಲಾಗಿರೋದು ಲಕ್ಷ್ಮಣ್ ಸವದಿ. ಯಾಕಂದ್ರೆ ಗೋಕಾಕ್ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಮಹೇಶ್ ಕುಮಟಳ್ಳಿ ಅವರಿಗೇ ಟಿಕೆಟ್ ನೀಡಬೇಕು ಅನ್ನೋದು ರಮೇಶ್ ಜಾರಕಿಹೊಳಿ ಆಗ್ರಹ. ಆದ್ರೆ, ಇದು ಲಕ್ಷ್ಮಣ್ ಸವದಿ ಅವರ ಕ್ಷೇತ್ರ. ಹೀಗಾಗಿ, ಲಕ್ಷ್ಮಣ್ ಸವದಿ ಸಹಜವಾಗಿಯೇ ರಮೇಶ್ ಜಾರಕಿಹೊಳಿ ವಿರುದ್ಧ ಕೆಂಗಣ್ಣು ಬೀರಿದ್ದಾರೆ.
ಏನ್ಮಾಡ್ತಾರೆ ಲಕ್ಷ್ಮಣ್ ಸವದಿ? ಕಾಂಗ್ರೆಸ್ ಆಪರೇಷನ್?
ಗೋಕಾಕ್ನಲ್ಲಿ ಹಾಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೇ ಬಿಜೆಪಿ ಟಿಕೆಟ್ ಕೊಡಬೇಕು ಅನ್ನೋದು ರಮೇಶ್ ಜಾರಕಿಹೊಳಿ ಆಗ್ರಹ. ಆದರೆ, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 2018ರಲ್ಲಿ ಸ್ಪರ್ಧೆ ಮಾಡಿದ್ದವರು ಲಕ್ಷ್ಮಣ್ ಸವದಿ. 2019ರಲ್ಲಿ ಮಹೇಶ್ ಕುಮಟಳ್ಳಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ್ ಸವದಿ ಅವರು ಮಹೇಶ್ ಕುಮಟಳ್ಳಿಗೆ ತಮ್ಮ ಗೋಕಾಕ್ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಇದೀಗ 2023ರ ಚುನಾವಣೆಯಲ್ಲೂ ಗೋಕಾಕ್ ಕ್ಷೇತ್ರವನ್ನು ಮಹೇಶ್ ಕುಮಟಳ್ಳಿಗೆ ಬಿಟ್ಟುಕೊಟ್ಟರೆ ನಾನು ಎಲ್ಲಿ ಸ್ಪರ್ಧಿಸಲಿ ಅನ್ನೋದು ಲಕ್ಷ್ಮಣ್ ಸವದಿ ಪ್ರಶ್ನೆ. ಹೀಗಾಗಿ, ತಮಗೆ ಗೋಕಾಕ್ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲೇ ಬೇಕು ಅಂತಾ ಲಕ್ಷ್ಮಣ್ ಸವದಿ ಒತ್ತಡ ಹೇರ್ತಿದ್ಧಾರೆ. ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿರುವ ರಮೇಶ್ ಜಾರಕಿಹೊಳಿ, ಬಿಜೆಪಿ ಹೈಕಮಾಂಡ್ ಒಂದು ವೇಳೆ ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್ ಕೊಡದಿದ್ದರೆ ತಾವು ರಾಜಕೀಯ ಸನ್ಯಾಸ ಸ್ವೀಕಾರ ಮಾಡುವ ಬೆದರಿಕೆ ಹಾಕಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ಗೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ, ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿ ಇರುವ ಲಕ್ಷ್ಮಣ್ ಸವದಿ ಅವರನ್ನು ಕಾಂಗ್ರೆಸ್ ತನ್ನನ್ನ ಸೆಳೆಯುವ ತಂತ್ರಗಾರಿಕೆ ಮಾಡ್ತಿದೆ ಅನ್ನೋ ಊಹಾಪೋಹಗಳೂ ಕೇಳಿ ಬರ್ತಿವೆ.
ಬಿಜೆಪಿಗೆ ಕಗ್ಗಂಟಾಗಿವೆ ಬೆಳಗಾವಿಯ ಹಲವು ಕ್ಷೇತ್ರಗಳು!
ಟಿಕೆಟ್ ಹಂಚಿಕೆ ವೇಳೆ ಈ ಸನ್ನಿವೇಶವನ್ನು ಜಾಣತನದಿಂದ ನಿಭಾಯಿಸದಿದ್ದರೆ ಬಿಜೆಪಿಗೆ ಒಳೇಟು ಬೀಳುವ ಸಾಧ್ಯತೆಗಳು ಇಲ್ಲದಿಲ್ಲ. ಹೀಗಾಗಿ, ಆದಷ್ಟೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯ ಮುಖಂಡರ ಒಮ್ಮತದೊಂದಿಗೆ ಟಿಕೆಟ್ ಹಂಚಿಕೆ ಕಸರತ್ತು ಅಂತಿಮಗೊಳಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಈ ನಡುವೆ, ಬೆಳಗಾವಿಯ ಲಿಂಗಾಯತ ಮುಖಂಡರು ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಅಂತಾ ಹಲವು ಕ್ಷೇತ್ರಗಳಲ್ಲಿ ಒತ್ತಡ ಹೇರಿದ್ಧಾರೆ. ಮಹಾಂತೇಶ ಕವಟಗಿಮಠ, ಡಾ. ರವಿ ಪಾಟೀಲ್, ಮುರುಘೇಂದ್ರ ಗೌಡ ಪಾಟೀಲ್ ಸೇರಿದಂತೆ ಹಲವು ಲಿಂಗಾಯತ ನಾಯಕರು ಬಿಜೆಪಿ ಟಿಕೆಟ್ಗಾಗಿ ಕಾಯುತ್ತಿದ್ಧಾರೆ. ಬೆಳಗಾವಿ ಉತ್ತರ ಮತಕ್ಷೇತ್ರವನ್ನೇ ಉದಾಹರಣೆಯನ್ನಾಗಿ ನೋಡೋದಾದ್ರೆ, ಇಲ್ಲಿ ಮರಾಠಾ ಸಮುದಾಯದ ಹಾಲಿ ಶಾಸಕ ಅನಿಲ್ ಬೆನಕೆ ಟಿಕೆಟ್ ಆಕಾಂಕ್ಷಿ. ಆದ್ರೆ, ಈ ಕ್ಷೇತ್ರದಲ್ಲೂ ಬಿಜೆಪಿ ಟಿಕೆಟ್ಗಾಗಿ ಲಿಂಗಾಯತ ಸಮುದಾಯದ ಮುಖಂಡರು ಲಾಬಿ ನಡೆಸುತ್ತಿದ್ದು, ಬಿಜೆಪಿ ಅತಂತ್ರ ಸ್ಥಿತಿಯಲ್ಲಿದೆ.
ಸವದತ್ತಿ ಕ್ಷೇತ್ರವೂ ಬಿಜೆಪಿಗೆ ತಲೆನೋವು!
ಶಾಸಕ ಆನಂದ್ ಮಾಮನಿ ಅವರು ನಿಧನರಾದ ನಂತರ ಅವರ ಜಾಗದಲ್ಲಿ ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕೆ ಇಳಿಯುತ್ತಾರೆ. ಮಾಮನಿ ಅವರ ಪತ್ನಿಗೆ ಬಿಜೆಪಿ ಟಿಕೆಟ್ ಕೊಡುತ್ತಾ? ಒಂದು ವೇಳೆ ಮಾಮನಿ ಪತ್ನಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಅದು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದಂತಾಗುತ್ತೆ. ಇದು ಬಿಜೆಪಿ ಟಿಕೆಟ್ಗಾಗಿ ಕಾಯುತ್ತಿರುವ 10ಕ್ಕೂ ಹೆಚ್ಚು ಆಕಾಂಕ್ಷಿಗಳ ವಾದ. ಹೀಗಾಗಿ, ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋದೂ ಕೂಡಾ ಸದ್ಯದ ಕುತೂಹಲ..