ಮೈಸೂರು: ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಸದ್ದು ಮಾಡಿದ್ದ ಚಾಮುಂಡೇಶ್ವರಿ ಕ್ಷೇತ್ರದ (Chamundeshwari Constituency) ಉಪ ಚುನಾವಣೆಯ ಬಹು ಮುಖ್ಯ ಸ್ವಾರಸ್ಯ ವಿಚಾರವಿದು. ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನಾಮಧೇಯ ರೂಪದ ಪಕ್ಷೇತರ ಅಭ್ಯರ್ಥಿಗೆ ಬಂದ ಅನಿರೀಕ್ಷಿತ ಮತಗಳೇ ಸಿದ್ದರಾಮಯ್ಯ (Siddaramaiah) ಪಾಲಿಗೆ ವರದಾನವಾಗಿತ್ತು.
ಅದು ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಕಾಲ. ಹೆಚ್ಡಿ ದೇವೇಗೌಡರೊಂದಿಗೆ ಮುನಿಸಿಕೊಂಡು ಸಿದ್ದರಾಮಯ್ಯ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಪರಿಣಾಮ 2006 ಡಿಸೆಂಬರ್ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಸಲಾಗಿತ್ತು. ಜೆಡಿಎಸ್ನವರು ಹೋದೆಡೆಯೆಲ್ಲಾ ಮೊದಲನೇ ಗುಂಡಿ ಒತ್ತಿ ಎಂದು ಪ್ರಚಾರ ಮಾಡಿದ್ದರು. ಏಕೆಂದರೆ ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ಅವರ ಹೆಸರು ಮತಯಂತ್ರದಲ್ಲಿ ಮೊದಲಿತ್ತು. ಅದರಂತೆ ಮತದಾರರು ಮೊದಲ ಗುಂಡಿ ಒತ್ತಿದರು. ಮತಯಂತ್ರದ ಮೇಲಿನಿಂದ ಮೊದಲ ಗುಂಡಿಯೋ ಅಥವಾ ಮತಯಂತ್ರದ ಕೆಳಗಿನಿಂದ ಮೊದಲ ಗುಂಡಿಯೋ ಎಂದು ಹೇಳಿರಲಿಲ್ಲ. ಇದರಿಂದ ದೊಡ್ಡ ಯಡವಟ್ಟಾಗಿ ಹೋಗಿತ್ತು.
ಮತಯಂತ್ರದ ಮೇಲ್ಬಾಗದ ಮೊದಲ ಗುಂಡಿ ಒತ್ತಿದ್ದರಿಂದ ಶಿವಬಸಪ್ಪ ಅವರಿಗೆ 1,15,255 ಮತಗಳು ದೊರೆತರೆ, ಮತ ಯಂತ್ರದ ಕೆಳಭಾಗದ ಮೊದಲ ಗುಂಡಿ ಒತ್ತಿದ್ದರಿಂದ ಪಕ್ಷೇತರರಾದ ಸರ್ವೋತ್ತಮ ಅವರಿಗೆ ಅನಿರೀಕ್ಷಿತವಾಗಿ 4,183 ಮತಗಳು ದೊರೆತಿದ್ದವು. ಏಕೆಂದರೆ ಸಮಾಜವಾದಿ ಪಕ್ಷದ ಬಿ ಕರುಣಾಕರ್ ಅವರಿಗೆ 3,304, ಜೆಡಿಎಸ್ನಿಂದ ಬಂಡಾಯವೆದ್ದು ಜೆಡಿಯು ಅಭ್ಯರ್ಥಿಯಾಗಿದ್ದ ಎಎಸ್ ಗುರುಸ್ವಾಮಿ ಅವರಿಗೆ 941 ಮತಗಳು ದೊರೆತಿದ್ದವು.
ಗುಂಡಿ ಒತ್ತುವುದರಲ್ಲಿ ಆದ ಗೊಂದಲದ ಪರಿಣಾಮ ಎಂಬಂತೆ 1,15,512 ಮತಗಳನ್ನು ಪಡೆದ ಸಿದ್ದರಾಮಯ್ಯ ಗೆದ್ದರು. ಶಿವಬಸಪ್ಪ ಮತ್ತು ಸಿದ್ದರಾಮಯ್ಯ ಅವರು ಪಡೆದ ಮತಗಳ ಅಂತರ ಕೇವಲ 257 ಮಾತ್ರ ಆಗಿತ್ತು.