ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಗನ್ ಮ್ಯಾನ್ ನೀಡುವಂತೆ ಪೊಲೀಸ್ ಆಯುಕ್ತರಿಗೆ ನಿರ್ಮಾಪಕ ಹಾಗೂ ಸುದೀಪ್ ಆಪ್ತ ಜಾಕ್ ಮಂಜು ಮನವಿ ಸಲ್ಲಿಸಲು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು.
ಪೊಲೀಸ್ ಅಧಿಕಾರಿಗಳು ಮೀಟಿಂಗ್ ನಲ್ಲಿ ಇದ್ದ ಕಾರಣದಿಂದಾಗಿ ಜಾಕ್ ಮಂಜು ವಾಪಸ್ಸಾಗಿದ್ದಾರೆ. ಜೊತೆಗೆ ಖಾಸಗಿ ವಿಡಿಯೋ ಬೆದರಿಕೆಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡದಂತೆ ಕೋರ್ಟಿಗೆ ಮಂಜು ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಅಂದೇ ಸುದೀಪ್ ಅವರಿಗೆ ಖಾಸಗಿ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದು, ಈ ಸಂಬಂಧ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುದೀಪ್ ಅವರ ಹೆಸರಿನಲ್ಲಿ ಎರಡು ಪತ್ರಗಳು ಬಂದಿದ್ದು, ಮಾನಹಾನಿ ಮಾಡುವಂತಹ ಕೆಲಸಕ್ಕೆ ಪತ್ರ ಬರೆದವರು ಕೈ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು.
ಪತ್ರಗಳ ಕುರಿತಂತೆ ದೂರು ದಾಖಲಾದ ದಿನವೇ ಸುದೀಪ್ ಮಾಧ್ಯಮಗಳ ಜೊತೆ ಮಾತನಾಡಿ, ‘ಆ ಪತ್ರದ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ. ಸಿನಿಮಾ ಇಂಡಸ್ಟ್ರಿಯವರೇ ಈ ಕೃತ್ಯದ ಹಿಂದೆ ಇದ್ದಾರೆ. ಅವರಿಗೆ ಕಾನೂನು ಮೂಲಕವೇ ಉತ್ತರಿಸುತ್ತೇನೆ’ ಎಂದಿದ್ದು ಇದೀಗ ಜಾಕ್ ಮಂಜು ಸುದೀಪ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದಾರೆ.