ಬೆಂಗಳೂರು : ಲಖನೌ ಸೂಪರ್ ಜಯಂಟ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 212 ರನ್ಗಳ ಬೃಹತ್ ಮೊತ್ತ ದಾಖಲಿಸಿಯೂ 1 ವಿಕೆಟ್ ಅಂತರದಲ್ಲಿ ಸೋಲುಂಡಿತು. ಆರ್ಸಿಬಿ ತಂಡಕ್ಕೆ ಈ ಸೋಲು ನುಂಗಲಾರದ ತುತ್ತಾಗಿರುವ ಸಂದರ್ಭದಲ್ಲಿ ಮಾತಿಗಿಳಿದಿರುವ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸೈಮನ್ ಡುಲ್, ಎಲ್ಎಸ್ಜಿ ವಿರುದ್ಧ ಆರ್ಸಿಬಿ ಸೋಲನುಭವಿಸುವುದಕ್ಕೆ ವಿರಾಟ್ ಕೊಹ್ಲಿ ಪರೋಕ್ಷವಾಗಿ ಕಾರಣವಾಗಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ವೈಯಕ್ತ ದಾಖಲೆಗಳ ಕಡೆಗೆ ಗಮನ ಕೊಟ್ಟ ವಿರಾಟ್ ಕೊಹ್ಲಿ ಅವರ ಆಟವನ್ನು ಕಟುವಾಗಿ ಟೀಕೆ ಮಾಡಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡದ ಪರ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 61 ರನ್ಗಳ ಕೊಡುಗೆ ಕೊಟ್ಟರು. ಅಷ್ಟೇ ಅಲ್ಲದೆ ಓಪನರ್ ಫಾಫ್ ಡು’ಪ್ಲೆಸಿಸ್ ಜೊತೆಗೂಡಿ ಮೊದಲ ವಿಕೆಟ್ಗೆ 96 ರನ್ಗಳ ಜೊತೆಯಾಟವನ್ನೂ ಆಡಿದರು. ಎಚ್ಚರಿಕೆಯ ಆರಂಭದ ಬಳಿಕ ಆರ್ಸಿಬಿ ತಂಡದ ರನ್ ಗಳಿಕೆಯ ವೇಗಕ್ಕೆ ಕಿಚ್ಚು ಹಚ್ಚಿದ್ದೇ ವಿರಾಟ್ ಕೊಹ್ಲಿ. ಎಲ್ಎಸ್ಜಿ ವೇಗಿಗಳಾ ಅವೇಶ್ ಖಾನ್ ಮತ್ತು ಮಾರ್ಕ್ ವುಡ್ ಎದುರು ಕೊಹ್ಲಿ ಭಯಮುಕ್ತವಾಗಿ ಬ್ಯಾಟ್ ಬೀಸಿ ಗಮನ ಸೆಳೆದರು.
ಪವರ್-ಪ್ಲೇ ಓವರ್ಗಳಲ್ಲೇ ಕೊಹ್ಲಿ 42 ರನ್ ದಕ್ಕಿಸಿಕೊಂಡಿದ್ದರು. ಇದು ಪವರ್-ಪ್ಲೇ ಓವರ್ಗಳಲ್ಲಿ ವಿರಾಟ್ ಗಳಿಸಿದ ಗರಿಷ್ಠ ಸ್ಕೋರು ಕೂಡ ಹೌದು. ಆದರೆ, 42 ರನ್ ಬಳಿಕ ಅರ್ಧಶತಕ ಬಾರಿಸಲು ವಿರಾಟ್ 10 ಎಸೆತಗಳನ್ನು ತೆಗೆದುಕೊಂಡೆರು. ಅರ್ಧಶತಕ ಹತ್ತಿರದಲ್ಲಿದೆ ಎಂದು ವೈಯಕ್ತಿಕ ದಾಖಲೆಯನ್ನು ಮನಗಂಡು ವಿರಾಟ್ ಎಚ್ಚರಿಕೆಯಿಂದ ಬ್ಯಾಟ್ ಮಾಡಿದರು ಎಂದು ಸೈಮನ್ ಡುಲ್ ವಾದಿಸಿದ್ದಾರೆ. ಲೈವ್ ಕಾಮೆಂಟರಿ ವೇಳೆ, “ಕೊಹ್ಲಿ ಇಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ಮನಗಂಡು ಬ್ಯಾಟ್ ಮಾಡುತ್ತಿದ್ದಾರೆ. 8 ರನ್ ಗಳಿಸಲು ಅವರು 10 ಎಸೆರತಗಳನ್ನು ತೆಗೆದುಕೊಂಡಿದ್ದಾರೆ. ಅದ್ಭುತ ಆರಂಭ ಪಡೆದರು, ಆದರೆ, 42ರಿಂದ 50 ರನ್ ಮುಟ್ಟಲು ಹತ್ತು ಎಸೆತಗಳನ್ನು ತೆಗೆದುಕೊಂಡಿದ್ದಾರೆ,” ಎಂದು ಟೀಕೆ ಮಾಡಿದರು.
ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಎಸೆದ 9ನೇ ಓವರ್ನಲ್ಲಿ ಸಿಂಗಲ್ ತೆಗೆದು ವಿರಾಟ್ ಕೊಹ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕ ಸಲುವಾಗಿ ಅವರು 35 ಎಸೆತಗಳನ್ನು ತೆಗೆದುಕೊಂಡರು.
ಸ್ಟ್ರೈಕ್ರೇಟ್ ಬಗ್ಗೆ ಟೀಕೆ ಮುಂದುವರಿಸಿದ ಹರ್ಷ ಭೋಗ್ಲೆ
ಜನಪ್ರಿಯ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ ಸ್ಟಾರ್ ಬ್ಯಾಟ್ಸ್ಮನ್ಗಳ ಸ್ಟ್ರೈಕ್ರೇಟ್ ಬಗೆಗಿನ ತಮ್ಮ ಟೀಕೆಯನ್ನು ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಮಂದಗತಿಯಲ್ಲಿ ಬ್ಯಾಟ್ ಮಾಡುತ್ತಾರೆಂದು ಟೀಕೆ ಮಾಡಿದ್ದರು. ಇದಕ್ಕೆ ಸನ್ರೈಸರ್ಸ್ ಹೈದರಾಬಾದ್ ಎದುರು ಅಜೇಯ 99 ರನ್ ಬಾರಿಸುವ ಮೂಲಕ ಉತ್ತರ ಕೊಟ್ಟ ಶಿಖರ್ ಧವನ್, ಪೋಸ್ಟ್ ಮ್ಯಾಚ್ ಪ್ರೆಸೆಂಟೇಟನ್ ವೇಳೆ ಹರ್ಷ ಭೋಗ್ಲೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಮತ್ತೆ ಮಾತಿಗಿಳಿದಿರುವ ಹರ್ಷ ಭೋಗ್ಲೆ, ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು’ಪ್ಲೆಸಿಸ್ ಅವರ ಸ್ಟ್ರೈಕ್ರೇಟ್ ಅನ್ನು ಪ್ರಶ್ನೆ ಮಾಡಿದ್ದಾರೆ.