ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲಿಯೇ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯ (ಬಿಎಸ್ ಸತ್ಯನಾರಾಯಣ) ಅವರು ನಿರ್ಧರಿಸಿದ್ದು, ಬಿಜೆಪಿ ನಾಯಕರಿಗೆ ಮತ್ತೊಂದು ತಲೆಬಿಸಿ ಶುರುವಾಗಿದೆ.
ಬಿಜೆಪಿಯ ಟಿಕೆಟ್ ಘೋಷಣೆಯ ಬೆನ್ನಲ್ಲಿಯೇ ಹಲವು ಕ್ಷೇತ್ರಗಳಂತೆ ಬಸವನಗುಡಿ ಬಿಜೆಪಿಯಲ್ಲಿಯೂ ಅಸಮಾಧಾನ ಭುಗಿಲೆದ್ದಿದೆ. ಬಸವನಗುಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇಲ್ಲಿ ಕಟ್ಟೆ ಸತ್ಯ ಅವರು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮತ್ತೊಂದು ಬಾರಿ ಬಿಜೆಪಿ ಹೈಕಮಾಂಡ್ ರವಿ ಸುಬ್ರಹ್ಮಣ್ಯ ಅವರಿಗೆ ಮಣೆ ಹಾಕಿದೆ.
ಇದರಿಂದ ಬೇಸತ್ತಿರುವ ಕಟ್ಟೆ ಸತ್ಯ ಅವರು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ಸರ್ವಾಧಿಕಾರ ಧೋರಣೆ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ವಂಶ ಆಡಳಿತದ ವಿರುದ್ಧ, ಸ್ವಾರ್ಥದ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಕಟ್ಟೆ ಸತ್ಯನಾರಾಯಣ ಅವರು 1990ರಲ್ಲಿ ಮೊದಲು ಚುನಾವಣೆಗೆ ಸ್ಪರ್ಧಿಸಿದ್ದರು. ಅದಾದ ಬಳಿಕ 5 ಬಾರಿ ಬಿಬಿಎಂಪಿ ಸದಸ್ಯರಾಗಿ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿದ್ದರು. ಹಲವು ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡಿದ್ದು, ಪ್ರತಿಪಕ್ಷ, ಆಡಳಿತ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಕಳೆದ ಬಾರಿಯೂ ಕಟ್ಟೆ ಸತ್ಯನಾರಾಯಣ ಅವರು ಬಸವನಗುಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಹಿರಂಗವಾಗಿಯೇ ನನಗೂ ಟಿಕೆಟ್ ನೀಡಿ ಎಂದು ಹೇಳಿದ್ದರು. ಆದರೆ, ಹೈಕಮಾಂಡ್ ಕಳೆದ ಮೂರು ಚುನಾವಣೆಗಳಲ್ಲಿಯೂ ರವಿ ಸುಬ್ರಹ್ಮಣ್ಯ ಅವರಿಗೆ ಮಣೆ ಹಾಕಿದ್ದು, ಈ ಬಾರಿಯೂ ಅವರಿಗೆ ಟಿಕೆಟ್ ನೀಡಿದೆ.