ಕೋಲಾರ: ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದಿಂದ ಬಿ ಫಾರಂ ಪಡೆಯುವ ಕನಸು ಇಟ್ಟುಕೊಂಡಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ್ ಕೃಷ್ಣಾಗೆ ನಿರಾಸೆಯಾಗಿದೆ. ಬಿಜೆಪಿ ಟಿಕೆಟ್ ಮಾಜಿ ಶಾಸಕ ಸಂಪಂಗಿ ಮಗಳು ಅಶ್ವಿನಿ ಸಂಪಂಗಿ ಅವರ ಪಾಲಾಗಿದೆ. ಇದರಿಂದ ಅಸಮಾಧಾನಗೊಂಡ ಮೋಹನ್ ಕೃಷ್ಣ ಬೆಂಬಲಿಗರು ಬಿಜೆಪಿ ಪಕ್ಷ ಹಾಗೂ ಸಂಸದ ಮುನಿಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದೀಗ ಕೆಜಿಎಫ್ ಕ್ಷೇತ್ರದಲ್ಲೂ ಸಹ ಬಿಜೆಪಿ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನಾಲ್ಕೈದು ವರ್ಷಗಳಿಂದ ಸೇವೆ ಮಾಡುತ್ತಿರುವ ಮೋಹನ್ ಕೃಷ್ಣಗೆ ಟಿಕೆಟ್ ಕೈತಪ್ಪಲು ಸಂಸದ ಮುನಿಸ್ವಾಮಿ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಅವರು ನಾಲಾಯಕ್ ಸಂಸದರು, ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇನ್ನು ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿಗೆ ನಾವು ಮತ ನೀಡುವುದಿಲ್ಲ. ಬಿಜೆಪಿ ನಾಲ್ಕನೇ ಸ್ಥಾನದಲ್ಲಿರುತ್ತದೆ. ಮೋಹನ್ ಕೃಷ್ಣ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಳಿಸುತ್ತೇವೆ ಎಂದು ಬೆಂಬಲಿಗರು ಹೇಳಿದರು.
ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಮೋಹನ್ ಕೃಷ್ಣ ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಮಾತನಾಡಿದ ಮೋಹನ್ ಕೃಷ್ಣ ಅವರು, ಎಲ್ಲಾ ಮಾನದಂಡಗಳಿಂದ ಪಾಸಾಗಿದ್ದರೂ ನನಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. ನಾನು ದೇವರೆಂದು ನಂಬಿದ್ದ ಸಂಸದರೂ ನನ್ನ ಪರ ನಿಂತಿಲ್ಲ. ಆದ್ರೆ ಎಲ್ಲೋ ಒಂದು ಕಡೆ ಜಾತಿ ಎಂಬ ವಿಷ ಬೀಜವನ್ನು ಬಿತ್ತಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಇದಕ್ಕೆ ನೇರ ಕಾರಣ ಸಂಸದ ಮುನಿಸ್ವಾಮಿ ಅವರು. ಕೆಜಿಎಫ್ ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ನನಗೆ ಹೇಳಿದವರೇ ಸಂಸದರು. ಮಾಜಿ ಶಾಸಕ ಸಂಪಂಗಿ ಸರಿಯಿಲ್ಲ, ಅವರನ್ನು ಮನೆಗೆ ಕಳಿಸುತ್ತೇನೆ ಎಂದು ನನಗೆ ಹಲವಾರು ಬಾರಿ ಹೇಳಿದ್ದಾರೆ. ಆದ್ರೆ ಕೊನೆಯಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಸಂಸದರ ವಿರುದ್ಧ ಹರಿಹಾಯ್ದರು.
ನಿನ್ನತ್ರ ಹಣವಿಲ್ಲ, ಸಾಲ ಮಾಡಿ ಜನಸೇವೆ ಮಾಡ್ತಿದ್ದೀಯ ಅಂತ ಅವಮಾನ ಮಾಡಿದ್ರು. ಅವಮಾನಗಳಿಗೆ ನಾನು ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ನಿನ್ನತ್ರ ದುಡ್ಡಿದೆ ಅಂತ ತೋರಿಸಿದ್ರೆ ನಿನ್ನನ್ನೇ ಅಭ್ಯರ್ಥಿ ಮಾಡ್ತೀನಿ ಅಂತ ಹೇಳಿದ್ರು. ಕೊನೆಗೆ ನಿನ್ನತ್ರ ಜನ ಯಾರೂ ಇಲ್ಲ ಅಂತ ಪ್ರತಿ ಹಂತದಲ್ಲೂ ಅವಮಾನ ಮಾಡ್ತಿದ್ದರು. ಬಿ ಫಾರಂ ಬರಬೇಕಂದರೆ ನಾವು ಹೇಳಿದ ಕೆಲಸ ಮಾಡಬೇಕು ಎಂದರು. ಹಾಗಾಗಿ ಅವರು ಹೇಳಿದ ಕೆಲಸವೆಲ್ಲಾ ಮಾಡಿದೆ. ಸಂಪಂಗಿ ಮತ್ತು ಅವರ ಕುಟುಂಬದವರನ್ನು ಯಾವತ್ತೂ ಎಂಟರ್ ಟೇನ್ ಮೆಂಟ್ ಮಾಡಲ್ಲ. ನಿನಗೇ ಬಿ ಫಾರಂ ಕೊಡಿಸುತ್ತೇನೆಂದು ನನಗೆ ಹೇಳಿ, ಅವರಿಗೆ ಏನು ಹೇಳಬೇಕೋ ಅದನ್ನ ಹೇಳಿ ಕೊನೆಯ ಕ್ಷಣದಲ್ಲಿ ನನಗೆ ಟಿಕೆಟ್ ಕೈತಪ್ಪುವಂತೆ ಮಾಡಿದ್ದಾರೆ. ಹಾಗಾದ್ರೆ ನಾನು ಈ ಜಾತಿಯಲ್ಲೇ ಹುಟ್ಟಿದ್ದು ತಪ್ಪಾಯ್ತಾ? ಎಂದು ಮೋಹನ್ ಕೃಷ್ಣ ಭಾವುಕರಾದರು.
ಕೆಜಿಎಫ್ ಕ್ಷೇತ್ರ ಒಂದು ಮೀಸಲು ಕ್ಷೇತ್ರ. ದಲಿತರೆಂದರೆ ಎಲ್ಲರೂ ದಲಿತರೇ. ಆದ್ರೆ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದಲಿತರಲ್ಲೂ ಲೆಫ್ಟು ರೈಟು ಅಂತ ಮಾಡಿದ್ದಾರೆ. ಹಾಗಾಗಿ ನನಗೆ ಟಿಕೆಟ್ ಕೊಟ್ಟಿಲ್ಲ. ಹಾಗಾಗಿ ಇನ್ನೆಡರು ದಿನಗಳಲ್ಲಿ ಮುಖಂಡರ ಜೊತೆ ಚರ್ಚೆ ಮಾಡಿ ನನ್ನ ಮುಂದಿನ ನಡೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಮೋಹನ್ ಕೃಷ್ಣ ಹೇಳಿದರು.