ಲಂಡನ್ : ಕೋವಿಡ್-19 ವೈರಸ್ ಪ್ರಾಣಿಗಳಿಂದ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಚೀನಾದ ಕಾಯಿಲೆ ನಿಯಂತ್ರಣ ಮತ್ತು ನಿರ್ವಹಣೆ ಕೇಂದ್ರದ ಮಾಜಿ ಮುಖ್ಯಸ್ಥ ಜಾರ್ಜ್ ಗಾವ್ ತಿಳಿಸಿದ್ದಾರೆ.
‘ಸಾಂಕ್ರಾಮಿಕಕ್ಕೆ ಪೂರ್ವಸಿದ್ಧತೆ’ ವಿಷಯ ಕುರಿತಂತೆ ಲಂಡನ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೆಲವು ಪ್ರಾಣಿಗಳೇ ಸೋಂಕಿಗೆ ಕಾರಣ ಎಂದು ಈಗಲೂ ಜನರು ಯೋಚಿಸುತ್ತಾರೆ. ಆದರೆ ಯಾವ ಪ್ರಾಣಿಯಿಂದ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ’. ‘ವೈರಸ್ ಮೂಲ ಯಾವುದು ಎಂಬುದು ಇನ್ನೂ ನಿಗೂಢವಾಗಿದ್ದು, ಈ ಕುರಿತ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಚೀನಾ ಸರ್ಕಾರ ಘೋಷಿಸಿದೆ’ ಎಂದು ಹೇಳಿದರು. 2019ರಲ್ಲಿ ಮೊಟ್ಟ ಮೊದಲ ಬಾರಿಗೆ ಚೀನಾದ ವುಹಾನ್ನಲ್ಲಿ ಕೊರೊನಾ ವೈರಸ್ ಪತ್ತೆಯಾದಾಗ ಜಾರ್ಜ್ ಗಾವ್ ಸಿಡಿಸಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.