ಬಳ್ಳಾರಿ: ಕಂಪ್ಲಿಯ ಪುರಸಭೆಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಟಿ.ಹೆಚ್,ಸುರೇಶ್ ಬಾಬು ಅವರು ಚುನಾವಣಾಧಿಕಾರಿ ಡಾ.ಎನ್.ನಯನ ಅವರಿಗೆ ಶನಿವಾರ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಕುರುಗೋಡು ರಸ್ತೆಯಿಂದ ಬೈಕ್ ರ್ಯಾಲಿ ಮೂಲಕ ಉದ್ಭವ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಎತ್ತಿನಬಂಡಿಗಳ ಮೂಲಕ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳ ಹಾಗೂ ಅಪಾರ ಕಾರ್ಯಕರ್ತರೊಂದಿಗೆ ಪುರಸಭೆ ಕಛೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು. ಸೂಚಕರಾಗಿ ವಿರೂಪಾಕ್ಷಿ, ಪಿ.ಬ್ರಹ್ಮಯ್ಯ, ಕಡೆಮನೆ ಪಂಪಾಪತಿ ಇದ್ದರು.
ಜಿಲ್ಲೆಯ ಕಂಪ್ಲಿ ಕ್ಷೇತ್ರದಲ್ಲಿ ಜನರ ಸಮಯಕ್ಕಾಗಿ ಕೇವಲ ನಾಮ್ ಕೆ ವಾಸ್ತೇ ನಾಯಕ ಬೇಕಾಗಿಲ್ಲ. ಸುರೇಶ್ ಬಾಬು ಕಾಮ್ ಕರನೆವಾಲಾ ನಾಯಕರಿದ್ದು ಜನರು ಈ ಬಾರಿ ಇವರನ್ನು ಕೈ ಹಿಡಿಯಲಿದ್ದಾರೆ ಎಂದು ಸಚಿವರು ಹಾಗೂ ಸುರೇಶ್ ಬಾಬು ಅವರ ಸೋದರಮಾವರಾದ ಬಿ.ಶ್ರೀರಾಮುಲು ಹೇಳಿದರು.
ಕಂಪ್ಲಿಯಲ್ಲಿ ತಮ್ಮ ಸೋದರಳಿಯ ಟಿ.ಹೆಚ್.ಸುರೇಶ್ ಬಾಬು ನಾಮಪತ್ರ ಸಲ್ಲಿಕೆ ವೇಳೆ ಜೊತೆಗೆ ಇದ್ದು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಕಂಪ್ಲಿ ಕ್ಷೇತ್ರದ ಜನರು ಸಹಜವಾಗಿ ಬಲದಾವಣೆ ಬಯಸಿದ್ದಾರೆ. ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಕೆಲಸ ಮಾಡುವ ವ್ಯಕ್ತಿಯಾಗಿದ್ದು ಜನರು ಈ ಬಾರಿ ಇವರನ್ನೇ ಆಯ್ಕೆ ಮಾಡಲಿದ್ದಾರೆ. ಸುರೇಶಬಾಬುಗೆ ಇಷ್ಟುವರ್ಷದ ವನವಾಸ ಮುಗಿದಿದೆ. ಇನ್ನೇನಿದ್ದರೂ ಜನರ ಸೇವೆ ಮಾಡುವುದು ಒಂದೇ ಗುರಿ. ಕಾಂಗ್ರೆಸ್ ಪಕ್ಷ ಅಧಿಕಾರದಲಿದ್ದೂ ಈ ಕ್ಷೇತ್ರದಲ್ಲಿ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಪರೋಕ್ಷವಾಗಿ ಜೆ.ಎನ್.ಗಣೇಶ್ ಅವರನ್ನು ಕುಟುಕಿದರು.
ನಾನು ಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ನೂರಾರು ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ. ರೈತರಿಗೆ ಪ್ರಮುಖವಾಗಿ ಕೃಷಿ ನೀರಿಗಾಗಿ ಎರಡು ಬಾರಿ ಕಾಲುವೆಗೆ ನೀರು ಹಾಯಿಸುವ ಕ್ರಮ ಕೈಗೊಂಡಿದ್ದೇವೆ. 2008-09ರಲ್ಲಿ ಕೆ.ಎಸ್.ಈಶ್ವರಪ್ಪ ನೀರಾವರಿ ಮಂತ್ರಿಗಳಾಗಿದ್ದಾಗ ಒಣಗಿ ಹೋಗುತ್ತಿದ್ದ ಬೆಳೆಗಳನ್ನು ಉಳಿಸಲು ಭದ್ರಾ ಜಲಾಶಯದಿಂದ ನೀರು ಪೂರೈಸಿದ್ದರು. ಈ ಬಾರಿಯೂ ಸುರೇಶ್ ಬಾಬು ನೀರಾವರಿ ಅಧಿಕಾರಿಗಳ ಜೊತೆ ಮಾತನಾಡಿ, ಒಣಗಿ ಹೋಗುತ್ತಿರುವ ಬೆಳೆಗಳನ್ನು ಉಳಿಸಿದ್ದಾರೆ. ನಾಮಕಾವಾಸ್ತೆ ನಾಯಕರು ಈ ಕ್ಷೇತ್ರದ ಜನರಿಗೆ ಬೇಕಾಗಿಲ್ಲ. ಸುರೇಶ್ ಬಾಬು ಅವರಂತಹ ಕೆಲಸಗಾರರು ಬೇಕಾಗಿದ್ದಾರೆ. ಜನರು ಕೂಡ ಸುರೇಶ್ ಬಾಬು ಪರವಾಗಿದ್ದಾರೆ ಎಂದರು.
ನಂತರ ಟಿ.ಹೆಚ್.ಸುರೇಶ್ ಬಾಬು ಮಾತನಾಡಿ, ಕಂಪ್ಲಿ ಕ್ಷೇತ್ರದ ಜನರು ಬಿಜೆಪಿಗೆ ಮತ ನೀಡುವ ಮೂಲಕ ಜಯಕ್ಕೆ ನಾಂದಿಯಾಗಲಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಕಂಪ್ಲಿ ಕ್ಷೇತ್ರದ ಜನತೆಯ ಆಶೀರ್ವಾದ ಸದಾ ಇರುತ್ತದೆ. ಕಾಂಗ್ರೆಸ್,ಜೆಡಿಎಸ್ ಪಕ್ಷವು ಯಾವುದೇ ಸಿದ್ಧತೆ ಮಾಡಿಕೊಂಡರು, ಬಿಜೆಪಿ ಪಕ್ಷದ ವಿಜಯಕ್ಕೆ ಬ್ರೇಕ್ ಹಾಕುವುದಕ್ಕೆ ಆಗುವುದಿಲ್ಲ. ಬಳ್ಳಾರಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಾನಗಳಿಸಲಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವು ಅತಿ ಹೆಚ್ಚು ಸ್ಥಾನಗಳಿಂದ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜೆ.ಶಾಂತ,ಫಕ್ಕೀರಪ್ಪ,ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರ ಗೌಡ,ಕ್ಷೇತ್ರ ಅಧ್ಯಕ್ಷ ಅಳ್ಳಳ್ಳಿ ವಿರೇಶ,ಸುರೇಶಬಾಬುಪತ್ನಿ ದೀಪಾ ಮುಖಂಡರಾದ ಗುತ್ತಿಗನೂರ ವಿರೂಪಾಕ್ಷಗೌಡ,ಯರಂಗಳಿ ತಿಮ್ಮಾರೆಡ್ಡಿ,ಅನಿಲ್ ನಾಯ್ಡು,ಕೆ.ರಾಮಲಿಂಗಪ್ಪ ಬಿ.ಸಿದ್ದಪ್ಪ, ಪುರುಷೋತ್ತಮ, ವಿ.ಎಲ್.ಬಾಬು,ಸಿ.ಅರ್.ಹನುಮಂತ,ವಿ.ವಿದ್ಯಾಧರ, ದೇವೇಂದ್ರ, ಜಿ.ಸುಧಾಕರ, ಕೊಡಿದಲ್ ರಾಜು, , ಜಿ.ರಾಮಣ್ಣ,ಕುಮಾರಸ್ವಾಮಿ, ಭಾಸ್ಕರರೆಡ್ಡಿ, ವೆಂಕಟರಮಣ, ಕೆ.ಜ್ಯೋತಿ, ರಬಿಯಾ,ಬಸೇಜ್ ರೆಡ್ಡಿ ಪುರಸಭೆ ಸದಸ್ಯರು ಸೇರಿ ಅನೇಕ ಕಾರ್ಯಕರ್ತರು ಇದ್ದರು. ಐಟಿಬಿಪಿ ಭದ್ರತಾ ಪಡೆ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದೋಬಸ್ತ್ ನಲ್ಲಿ ಕುರುಗೋಡು ಎಎಸ್ ನಟರಾಜ ,ಡಿವೈಎಸ್ ಪಿ ಎಸ್.ಎಸ್.ಕಾಶಿ ಸಿಪಿಐಗಳಾದ ಸುರೇಶ ತಳವಾರ,ಜಯಪ್ರಕಾಶ,ಪಿಎಸ್ಐಗಳಾದವ ಸಣ್ಣ ಈರೇಶ,ತಾರಾಬಾಯಿ,ಬಸವರಾಜ,ರೇವಣಸಿದ್ದಯ್ಯ ವಿಜಯಪ್ರತಾಪ,ಶಾರವ್ವ ದೊಡ್ಡಾಣಿ ಪಾಲ್ಗೊಂಡಿದ್ದರು.