ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಯಾಕೆ ಪಕ್ಷ ಬಿಟ್ಟರೋ ಗೊತ್ತಿಲ್ಲ. ಅವರು ತುಂಬಾ ಲೇಟಾಗಿ ಹೋಗ್ತಿದ್ದಾರೆ, ಆರಾಮಾಗಿ ಮಕ್ಕಳು, ಮೊಮ್ಮಕ್ಕಳನ್ನು ಆಡಿಸೊದು ಬಿಟ್ಟು ಕಾಂಗ್ರೆಸ್ ಸೇರ್ಪಡೆ ಯಾಕೆ ಬೇಕು?, ಅವರಿಗೇನು ಈಗ 27 ವರ್ಷವೇ? 67 ವರ್ಷವಾಗಿದೆ. ಅಲ್ಲಿ ಧೂಳು ಹೊಡೆಯೋಕೆ ಕೂಡ ಇವರನ್ನು ಬಳಸಿಕೊಳ್ಳಲ್ಲ ಎಂದು ಸಚಿವ ಮುನಿರತ್ನ ಟಾಂಗ್ ಕೊಟ್ಟರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿ ಫಾರಂ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ನಮ್ಮ ರಾಜರಾಜೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ಬಿ ಫಾರಂ ಪಡೆದಿದ್ದೇನೆ. ಇಂದು ನಾಮಪತ್ರ ಸಲ್ಲಿಸುತ್ತೇನೆ. ನನ್ನನ್ನು ಗುರುತಿಸಿ ಟಿಕೆಟ್ ನೀಡಿದ ನಮ್ಮ ನಾಯಕರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಶೆಟ್ಟರ್ಗೆ ಸ್ಪೀಕರ್ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ, ಮುಖ್ಯಮಂತ್ರಿ ಸ್ಥಾನ ಸೇರಿ ಎಲ್ಲ ಸ್ಥಾನಗಳನ್ನೂ ಕೊಟ್ಟಿದೆ. ಎಲ್ಲೋ ನೆಮ್ಮದಿಯಾಗಿ ಪಕ್ಷದ ಕೆಲಸ ಮಾಡಿಕೊಂಡಿರುವುದು ಬಿಟ್ಟು ಈಗ ರಾಜೀನಾಮೆ ಕೊಟ್ಟು ಊರೂರು ಸುತ್ತುತ್ತಿದ್ದಾರೆ. ಕಾಂಗ್ರೆಸ್ ಸಹವಾಸ ಯಾಕೆ ಬೇಕು, ಅವರಿಗೆ ಬಿಜೆಪಿ ಏನು ಕಡಿಮೆ ಮಾಡಿದೆ. ಸಿಎಂ ಸ್ಥಾನಕ್ಕಿಂತ ಇನ್ನೇನು ಕೊಡಬೇಕು ತೃಪ್ತಿ ಮಾಡಲು. ಎಲ್ಲ ಅಧಿಕಾರ ಕೊಟ್ಟರೂ ಅಧಿಕಾರದ ದಾಹ ತೀರಲಿಲ್ಲ. ಹಾಗಾಗಿ ದೇವರು ಪ್ರತ್ಯಕ್ಷವಾದರೆ ಶೆಟ್ಟರ್ಗೆ ಇನ್ನೂ 100 ವರ್ಷ ಆಯಸ್ಸು ಕೊಡಲಿ ಎಂದು ಕೇಳುತ್ತೇನೆ ಎಂದು ವ್ಯಂಗ್ಯವಾಡಿದರು.
ಶೆಟ್ಟರ್ ಹಿರಿಯ ನಾಯಕರು, ರಾಜ್ಯ ಸುತ್ತಾಡಿ, ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲಿ. ಅದನ್ನು ಬಿಟ್ಟು ಮಗನಿಗೆ ಮದುವೆ ಮಾಡು ಎಂದರೆ ಅಪ್ಪನೇ ಮದುವೆ ಮಾಡಿಕೊಂಡಂತೆ ಅಭ್ಯರ್ಥಿ ಗೆಲ್ಲಿಸಿಕೊಂಡು ಬಾ ಎಂದರೆ ನಾನೇ ಅಭ್ಯರ್ಥಿ ಎಂದು ಹೋಗುತ್ತಿದ್ದಾರೆ. ಶೆಟ್ಟರ್ಗೆ ಇದೆಲ್ಲಾ ಬೇಕಾ? ಯಡಿಯೂರಪ್ಪ ರೀತಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಇದೆಯಾ? ಶೆಟ್ಟರ್ ತಮ್ಮ ಪಕ್ಕದ ಕ್ಷೇತ್ರ ಗೆಲ್ಲಿಸಲಿ ನೋಡೋಣ, ಅವರೇ ಬಿಜೆಪಿ ಚಿಹ್ನೆ ಇಲ್ಲದಿದ್ದರೆ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದರು.