ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಬಿ ಫಾರ್ಮ್ ಪಡೆದುಕೊಂಡು ನಾಮಪತ್ರ ಸಲ್ಲಿಕೆಗೆ ಹುಬ್ಬಳ್ಳಿ ಕಡೆಗೆ ಹೊರಟಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಜಗದೀಶ್ ಶೆಟ್ಟರ್ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದೇನೆ. ಒಬ್ಬ ಮಾಜಿ ಸಿಎಂ,
ಎರಡು ಬಾರಿ ಪ್ರತಿ ಪಕ್ಷ ನಾಯಕ, ಒಂದು ಪಕ್ಷದ ಅಧ್ಯಕ್ಷನಾಗಿದ್ದವನು ಪಕ್ಷಾಂತರ ಮಾಡುತ್ತಿರುವುದು ಬಹಳ ಜನರಿಗೆ ಆಶ್ಚರ್ಯವಾಗಿರಬಹುದು. ನನಗೆ ವೇದನೆಯಾಗಿದೆ ಎಂದು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲರ ಅಭಿಪ್ರಾಯ ಪಡೆದು ಕಾಂಗ್ರೆಸ್ ನಾಯಕರು ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು. ನನಗೆ ಬೇರೆ ದಾರಿ ಇಲ್ಲ. ನಾನು ಕಟ್ಟಿ ಬೆಳೆಸಿದ ಮನೆಯಿಂದ ಹೊರಗೆ ಕಳಿಸಿದರು. ಕಾಂಗ್ರೆಸ್ ತತ್ವ ಸಿದ್ಧಾಂತ ನಂಬಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿಕೊಂಡಿದ್ದಾರೆ.