ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅತ್ಯಂತ ಸುಲಭವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಹಾಗೂ ಭಾರತ ಜೋಡೋ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಐದು ವರ್ಷ ಜನರ ನೆಮ್ಮದಿ ಹಾಗೂ ಬದುಕನ್ನು ಕಿತ್ತುಕೊಂಡಿದೆ. ಜನ ಇವರಿಗೆ ಸರಿಯಾದ ಪಾಠ ಕಲಿಸಬೇಕು.
ನಾವು ಒಂದು ಉತ್ತಮ ಆಶಯದೊಂದಿಗೆ ಜನರಿಗೆ ಅನುಕೂಲವಾಗುವ ವಿಚಾರಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದೇವೆ. ಒಂದು ವಿಷನ್ ಇಟ್ಟುಕೊಂಡು ನಾವು ರಾಜ್ಯ ಚುನಾವಣೆಗೆ ಹೊರಟಿದ್ದೇವೆ. ಪಾರದರ್ಶಕ ಹಾಗೂ ಜನರ ಅಭಿಪ್ರಾಯವನ್ನು ಕೇಳಿಕೊಂಡು ಮುನ್ನಡೆಯುವ ಸರ್ಕಾರವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅತ್ಯಂತ ದೊಡ್ಡ ಮಟ್ಟದ ಯಶಸ್ಸಿನೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ರಾಹುಲ್ ಗಾಂಧಿ ಮುಖಂಡರಿಗೆ ಕರೆ ಕೊಟ್ಟಿದ್ದಾರೆ.