ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತವರು ಕ್ಷೇತ್ರವಾದ ಕನಕಪುರದಲ್ಲಿ (Kanakapura) ಕಾಂಗ್ರೆಸ್ನದ್ದೆ (Congress) ಸರ್ವಾಧಿಕಾರ. ಎದುರಾಳಿಗಳೇ ಇಲ್ಲದೇ ನಿರಾಯಾಸವಾಗಿ ಚುನಾವಣೆ ನಡೆಸುತ್ತಿದ್ದ ಕಾಂಗ್ರೆಸ್ಗೆ ಈ ಬಾರಿ ಠಕ್ಕರ್ ಕೊಡಲು ಬಿಜೆಪಿ ತಂತ್ರಗಾರಿಕೆ ನಡೆಸಿದೆ. ಎರಡು ದಶಕಗಳ ಹಿಂದೆ ಜೆಡಿಎಸ್ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿ.ಕೆ.ಶಿವಕುಮಾರ್ ಅವರ ಮುಷ್ಟಿಯಲ್ಲಿದೆ. ಕಾಂಗ್ರೆಸ್ನ ಅಬೇಧ್ಯ ಕೋಟೆಯನ್ನ ಬೇಧಿಸಲು ಬಿಜೆಪಿಯಿಂದ ಸಾಧ್ಯವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.
ಅಶೋಕ್ಗೆ ಸಹೋದರರ ಸವಾಲ್
ಕನಕಪುರದಲ್ಲಿ ಬಿಜೆಪಿಯಿಂದ (BJP) ಸಚಿವ ಆರ್. ಅಶೋಕ್ (R.Ashok) ಸ್ಪರ್ಧೆ ಕನಕಪುರ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರಕ್ಕೆ ಲಗ್ಗೆ ಇಟ್ಟು ಗೆಲುವು ಸಾಧಿಸಲು ಸಾಧ್ಯವೇ ಎಂಬ ಪ್ರಶ್ನೆ ಕೂಡಾ ಉದ್ಭವ ಆಗಿದೆ. ಸತತ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಶಿವಕುಮಾರ್ ಒಮ್ಮೆಯೂ ಸೋತಿಲ್ಲ. ಇಲ್ಲಿ ಡಿಕೆಶಿಯಷ್ಟೇ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ (D.K.Suresh) ಸಹ ಪ್ರಭಾವಿ. ಹೀಗಾಗಿ ಅಶೋಕ್ ಇಲ್ಲಿ ಸಹೋದರರ ಸವಾಲ್ ಎದುರಿಸಬೇಕಿದೆ. ಕೆಪಿಸಿಸಿ ಅಧ್ಯಕ್ಷರನ್ನು ತವರು ಕ್ಷೇತ್ರದಲ್ಲಿ ಕಟ್ಟಿಹಾಕುವ ಉದ್ದೇಶದಿಂದಲೇ ಅಶೋಕ್ ಕಣಕ್ಕೆ ಇಳಿಯುತ್ತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದನ್ನು ಅರಿತಿರುವ ಡಿ.ಕೆ.ಸುರೇಶ್ ಈಗಾಗಲೇ ಕ್ಷೇತ್ರದಲ್ಲಿ ಸಕ್ರಿಯರಾಗಿ ಸಂಚಾರ ಮಾಡ್ತಿದ್ದಾರೆ.
ಒಕ್ಕಲಿಗ ನಾಯಕರ ಫೈಟ್
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪನೆ, ವಿಧಾನಸೌಧದ ಮುಂದೆ ಕೆಂಪೇಗೌಡರ ಪುತ್ಥಳಿ ನಿರ್ಮಾಣದಂತಹ ಕಾರ್ಯಗಳ ಮೂಲಕ ಒಕ್ಕಲಿಗ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಅದರ ಮುಂದುವರಿದ ಭಾಗವಾಗಿ ಕನಕಪುರದಲ್ಲಿ ಕಾಂಗ್ರೆಸ್ನ ಒಕ್ಕಲಿಗ ನಾಯಕನ ವಿರುದ್ಧ ತನ್ನ ಪಕ್ಷದಲ್ಲಿನ ಅದೇ ಸಮುದಾಯದ ಪ್ರಭಾವಿ ನಾಯಕನನ್ನು ನಿಲ್ಲಿಸಿದೆ. ಈ ಮೂಲಕ ಕನಕಪುರದಲ್ಲಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಿದೆ. ಕನಕಪುರ ಕ್ಷೇತ್ರದಲ್ಲಿ 2.2 ಲಕ್ಷದಷ್ಟು ಮತದಾರರು ಇದ್ದು, ಇದರಲ್ಲಿ ಅಂದಾಜು ಅರ್ಧದಷ್ಟು ಮಂದಿ ಒಕ್ಕಲಿಗ ಸಮುದಾಯದವರಿದ್ದಾರೆ. ಹೀಗಾಗಿ ಈ ಬಾರಿ ಇಬ್ಬರು ಒಕ್ಕಲಿಗ ನಾಯಕರ ನಡುವಿನ ಸ್ಪರ್ಧೆ ಕುತೂಹಲ ಮೂಡಿಸಿದೆ.
ಕನಕಪುರ ಡಿಕೆಶಿ ಕೋಟೆಯಾದರೂ ಇಲ್ಲಿ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನು ಹೊಂದಿದೆ. ಈ ಹಿಂದೆ ಕನಕಪುರ ಕ್ಷೇತ್ರದಲ್ಲಿ ಜನತಾ ಪರಿವಾರದ ಪಿಜಿಆರ್ ಸಿಂಧ್ಯಾ ಸತತವಾಗಿ ಆರಿಸಿ ಬಂದಿದ್ದರು. ಸಾತನೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದ ವೇಳೆ 1985ರಲ್ಲಿ ಎಚ್.ಡಿ.ದೇವೇಗೌಡ ಹಾಗೂ ಡಿಕೆಶಿ ಮುಖಾಮುಖಿ ಆಗಿದ್ದು, ಹೆಚ್.ಡಿ.ದೇವೇಗೌಡರು ಗೆದ್ದಿದ್ದರು. ಬಳಿಕ 1999ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಇದೇ ಕ್ಷೇತ್ರದಲ್ಲಿ ಡಿಕೆಶಿ ವಿರುದ್ಧ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ನಂತರ 2008ರಲ್ಲಿ ಸಾತನೂರು ಕ್ಷೇತ್ರ ಕನಕಪುರ ಕ್ಷೇತ್ರದೊಂದಿಗೆ ವಿಲೀನಗೊಂಡಿತು. ಅಂದಿನಿಂದ ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಡಿಕೆಶಿ ಗೆಲುವು ಸಾಧಿಸುತ್ತಿದ್ದಾರೆ. ಅಲ್ಲದೇ ಸಾಂಪ್ರದಾಯಿಕ ಮತಗಳನ್ನ ಹೊಂದೊರೋ ಜೆಡಿಎಸ್ ನಿಂದ ಇಲ್ಲಿ ಯಾರೇ ಅಭ್ಯರ್ಥಿ ಆದರೂ 50-60 ಸಾವಿರ ಮತ ಪಡೆಯುತ್ತ ಬಂದಿದ್ದಾರೆ. ಕಳೆದ ಬಾರಿ ಇಲ್ಲಿ ಕಡೆ ಕ್ಷಣದಲ್ಲಿ ಜೆಡಿಎಸ್ ಬಿ ಫಾರಂ ಪಡೆದಿದ್ದ ನಾರಾಯಣ ಗೌಡ ಸಹ 47,643 ಪಡೆದಿದ್ದರು. ಈ ಬಾರಿ ಕನಕಪುರದಿಂದ ಜೆಡಿಎಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಹಾಗಾಗಿ ಈ ಬಾರಿ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನ ಹಾಕುತ್ತಾ ಎಂಬುದನ್ನ ಕಾದುನೋಡಬೇಕಿದೆ.
ಒಮ್ಮೆಯೂ ಠೇವಣಿಯನ್ನೇ ಉಳಿಸಿಕೊಳ್ಳದ ಬಿಜೆಪಿ
ಇನ್ನೂ ಬಿಜೆಪಿ ರಾಜಕೀಯ ಪ್ರಯೋಗಶಾಲೆಗೆ ಆಯ್ಕೆ ಮಾಡಿಕೊಂಡಿರುವ ಈ ಕ್ಷೇತ್ರ ಪಕ್ಷದ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಈವರೆಗಿನ ಚುನಾವಣೆಗಳಲ್ಲಿ ಇಲ್ಲಿ ಒಮ್ಮೆಯೂ ಬಿಜೆಪಿ ಪಕ್ಷಕ್ಕೆ ಠೇವಣಿ ಸಹ ಉಳಿದಿಲ್ಲ. ಪಕ್ಷ ಸಂಘಟನೆ ಕೂಡಾ ಅಷ್ಟಕ್ಕಷ್ಟೇ. ಉಳಿದ 25 ದಿನದಲ್ಲೇ ಪಕ್ಷ ಸಂಘಟನೆ ಜೊತೆಗೆ ಪ್ರಚಾರವನ್ನೂ ನಡೆಸಬೇಕಾದ ಸವಾಲು ಅಶೋಕ್ ಮುಂದೆ ಇದೆ.
ಕನಕಪುರ ಜಾತಿ ಲೆಕ್ಕಾಚಾರವೇನು?
ಇನ್ನೂ ಕನಕಪುರ ಕ್ಷೇತ್ರದಲ್ಲಿ ಒಟ್ಟು 2,21,912 ಮತದಾರರಿದ್ದಾರೆ. ಇದರಲ್ಲಿ 1,09,623 ಪುರುಷ ಮತದಾರರು ಹಾಗೂ 1,11,274 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದ ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗ -1,00,000, ದಲಿತ- 44,000, ಮುಸ್ಲಿಂ-22,000, ಲಿಂಗಾಯತ-19,000, ಕುರುಬ – 6,000, ತಿಗುಳರು -11,000, ಕ್ರಿಶ್ಚಿಯನ್ -2,500, ಬೆಸ್ತರು 6,000 ಹಾಗೂ ಇತರೆ- 9,000 ಮತದಾರರು ಕ್ಷೇತ್ರದಲ್ಲಿದ್ದಾರೆ