ಸ್ಯಾಂಡಲ್ ವುಡ್ ನಟಿ ಮಮತಾ ರಾಹುತ್ ಮದುವೆಯಾದ ಬಳಿಕ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ನಟನೆಯ ಜೊತೆಗೆ ನಿರ್ಮಾಪಕಿಯಾಗಿಯು ಗುರುತಿಸಿಕೊಂಡಿರುವ ಮಮತಾ ರಾಹುತ್ ಇದೀಗ ಮಹಿಳಾ ಪ್ರಧಾನ ಸಿನಿಮಾದ ಮೂಲಕ ಸಂಚಲನ ಸೃಷ್ಟಿಸಲು ರೆಡಿಯಾಗಿದ್ದಾರೆ.
ಮಮತಾ ರಾಹುತ್ ನಾಯಕಿಯಾಗಿ ನಟಿಸುತ್ತಿರುವ, ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ತಾರಿಣಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನೆರವೇರಿದ್ದು, ಚಿತ್ರವನ್ನು ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ನಿರ್ಮಿಸುತ್ತಿದ್ದಾರೆ.
ತಾರಿಣಿ ಮಹಿಳಾ ಪ್ರಧಾನ ಸಿನಿಮಾವಾಗಿದ್ದು ಚಿತ್ರದಲ್ಲಿ ಮಮತಾ ರಾಹುತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಹಿಂದೆ ‘ದಾರಿ ಯಾವುದಯ್ಯ ವೈಕುಂಠಕೆ’ ಸೇರಿದಂತೆ ಸಾಕಷ್ಟು ಸಧಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ ತಾರಿಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರ ಹಲವು ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಸಿದ್ದು ಪೂರ್ಣಚಂದ್ರ ತಾರಿಣಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ.
ಈಗಾಗಲೇ ಚಿತ್ರೀಕರಣ ಆರಂಭಿಸಿರುವ ತಾರಿಣಿ ಚಿತ್ರತಂಡದಲ್ಲಿ ಮಮತಾ ರಾಹುತ್ ಗೆ ನಾಯಕಿಯಾಗಿ ರೋಹಿತ್ ಬಣ್ಣ ಹಚ್ಚುತ್ತಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ಕುಮಾರ ಬೇಂದ್ರೆ, ತೇಜಸ್ವಿನಿ, ರಾಜು ಕಲ್ಕುಣಿ, ಶ್ರೀಸಾಯಿ ಮಂಜು, ಸುಚಿತ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.