ಖಾರ್ಟೂಮ್: ಸುಡಾನ್ ನಲ್ಲಿ ನಡೆಯುತ್ತಿರುವ ಸೇನೆ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವಿನ ಗುಂಡಿನ ದಾಳಿಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಜನ ವಸತಿ ಪ್ರದೇಶದ ಮೇಲೆ ಗುಂಡಿನ ದಾಳಿ ನಡೆದಿದ್ದು ಈಗಾಗಲೇ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಮಧ್ಯೆ ಕನ್ನಡದ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದ್ದು ಸಹಾಯ ಮಾಡುವಂತೆ ಮನವಿ ಮಾಡಿದೆ.
ದಾವಣಗೆರೆ ಜಿಲ್ಲೆಯ ಎಂಟು ಮಂದಿ ಸೇರಿ ಒಟ್ಟು ಕರ್ನಾಟಕದ 31 ಜನರು ವಾಸವಾಗಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದೆ. ಇದರಿಂದಾಗಿ ಕನ್ನಡಿಗರು ನೀರು ಆಹಾರ ವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಖಾರ್ಟೂಮ್ ನಗರದಲ್ಲಿ ಒಂದೇ ಮನೆಯಲ್ಲಿ ಕರ್ನಾಟಕದ ಸುಮಾರು 31 ಜನ ವಾಸವಾಗಿದ್ದಾರೆ. ಕಖೆದ ಐದು ವರ್ಷಗಳ ಹಿಂದೆ ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರಿನಿಂದ ಕೂಲಿ ಕೆಲಸಕ್ಕಾಗಿ ತೆರಳಿದ್ದು ಇವರು ಇದೀಗ ಜೀವ ಉಳಿಸಿಕೊಳ್ಳಲು ಪರದಾಡುವಂತಾಗಿದೆ.
ಗಿಡಮೂಲಿಕೆ ಔಷಧಿಗಳ ಮಾರಾಟಕ್ಕೆ ಹಾಗೂ ಕೂಲಿ ಕೆಲಸಕ್ಕಾಗಿ ಸೂಡಾನ್ ಗೆ ತೆರಳಿದ್ದ ಕಾರ್ಮಿಕರು ಇದೀಗ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳ್ನು ಹಂಚಿಕೊಂಡಿರುವ ಕಾರ್ಮಿಕರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.