ಬೆಂಗಳೂರು: ಕಾಂಗ್ರೆಸ್ನ (Congress) ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ. ಚುನಾವಣೆ ಮುಗಿಯುವವರೆಗೆ ಬಿಜೆಪಿಯಿಂದ (BJP) ಹೋದವರಿಗೆ ಸನ್ಮಾನ ಮಾಡುತ್ತಾರೆ. ಚುನಾವಣೆ ಮುಗಿದ ಮೇಲೆ ಅವರಿಗೆ ಅವಮಾನ ಮಾಡುವುದು ಕಾಂಗ್ರೆಸ್ನ ಸಂಸ್ಕೃತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.
ಪ್ಲಾನ್ ಮಾಡಿ ನನ್ನನ್ನು ಬಿಜೆಪಿಯಿಂದ ಹೊರದಬ್ಬಿದ್ದಾರೆ ಎಂಬ ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರು ಒಂದು ಕಾರಣ ಕೊಡಬೇಕು. ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಸ್ಥಾನಮಾನಗಳನ್ನು ಕೊಡುವುದರ ಜೊತೆಗೆ ಅವರನ್ನು ಅತ್ಯಂತ ಗೌರವಯುತವಾಗಿ ಕಂಡಿದೆ. ಇದರಲ್ಲಿ ಎರಡನೇ ಮಾತಿಲ್ಲ. ಕಳೆದ 25 ವರ್ಷದ ಅವರ ಬೆಳವಣಿಗೆಯಲ್ಲಿ ಬಿಜೆಪಿಯೇ ಪ್ರಮುಖವಾದ ಪಾತ್ರವನ್ನು ವಹಿಸಿದೆ. 25 ವರ್ಷ ಅವರನ್ನು ಬೆಳೆಸಿದ ಬಿಜೆಪಿ ಈಗ ಅವರನ್ನು ಕೆಳಗಿಳಿಸುವ ಪ್ರಯತ್ನವನ್ನು ಮಾಡಿಲ್ಲ. ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಪಕ್ಷದ ವರಿಷ್ಠರಿಗೂ ಕೂಡಾ ಇದರ ಬಗ್ಗೆ ಮಾಹಿತಿಯಿದೆ. ಪ್ರಮುಖ ನಾಯಕರಲ್ಲಿ ಶೆಟ್ಟರ್ ಕೂಡಾ ಒಬ್ಬರಾಗಿದ್ದರು. ಹೀಗಾಗಿ ಇದರಲ್ಲಿ ಷಡ್ಯಂತ್ರವಿದೆ ಅಥವಾ ಕೇಂದ್ರೀಕೃತವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಹೋಗುವಾಗ ಒಂದು ನೆಪ ಹೇಳಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಜನ ಸಮುದಾಯದಿಂದ ಹಾಗೂ ಕಾರ್ಯಕರ್ತರಿಂದ ಬೆಳೆದಿರುವ ಪಕ್ಷ. ಇಂತಹ ಘಟನೆಗಳನ್ನು ಸಂಪೂರ್ಣವಾಗಿ ನಿಭಾಯಿಸುವ ಶಕ್ತಿ ಬಿಜೆಪಿಗಿದೆ. ನಾವು ಖಂಡಿತವಾಗಿಯೂ ನಮ್ಮ ಕ್ಷೇತ್ರವನ್ನು ಗಟ್ಟಿಯಾಗಿ ಇಟ್ಟುಕೊಳ್ಳುತ್ತೇವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ನಮ್ಮ ಹಿಡಿತವನ್ನು ಸಾಧಿಸುವುದಕ್ಕೆ ಬೇಕಾಗಿರುವ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳತ್ತೇವೆ ಎಂದು ಹೇಳಿದರು.
ಕಳೆದ 50 ವರ್ಷಗಳಿಂದ ಲಿಂಗಾಯತ ನಾಯಕರನ್ನು ತುಳಿದಿದ್ದು ಇದೇ ಕಾಂಗ್ರೆಸ್ ಪಕ್ಷ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಲಿಂಗಾಯತರ ಮೇಲೆ ಯಾಕಿಷ್ಟು ಪ್ರೀತಿ ಬಂತೋ ಗೊತ್ತಿಲ್ಲ. ಲಿಂಗಾಯತ ಸಮುದಾಯ ಜಾಗೃತ ಸಮುದಾಯವಾಗಿದ್ದು, ಇದುವರೆಗೂ ಯಾರು ಅವರನ್ನು ಬೆಂಬಲಿಸಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಯಡಿಯೂರಪ್ಪನವರಂತಹ (B.S.Yediyurappa) ಮೇರು ನಾಯಕತ್ವ ಹೊಂದಿರುವ ನಾಯಕರು ನಮ್ಮ ಜೊತೆ ಇರುವವರೆಗೂ ಲಿಂಗಾಯತರು ನಮ್ಮ ಜೊತೆಗೆ ಇರುತ್ತಾರೆ ಎಂದರು.
ಕಾಂಗ್ರೆಸ್ನಲ್ಲಿ ಇದೇ ರೀತಿ ಅವತ್ತಿನ ಜನತಾ ಪಾರ್ಟಿಯಲ್ಲಿದ್ದ ವೀರೇಂದ್ರ ಪಾಟೀಲ್ ಅವರನ್ನು ಕರೆದುಕೊಂಡು ರಾಜ್ಯ ಸುತ್ತಿಸಿ ಅವರ ಮುಖಾಂತರವೇ 180 ಸೀಟ್ ಗೆದ್ದುಕೊಂಡಿದ್ದರು. ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ತೆಗೆದುಹಾಕಿ ಅವಮಾನ ಮಾಡಿರುವಂತಹ ಉದಾಹರಣೆಗಳು ನಮ್ಮ ಕಣ್ಣಮುಂದಿದೆ. ಅಲ್ಲದೇ ಬಂಗಾರಪ್ಪನವರನ್ನು ಉಪಯೋಗಿಸಿಕೊಂಡು ಮುಂದೆ ಅವರನ್ನು ತಿರಸ್ಕಾರ ಮಾಡಿರುವುದೂ ನಮಗೆ ಗೊತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಗಟ್ಟಿಯಾಗಿ ಇಂದಿರಾ ಕಾಂಗ್ರೆಸ್ ಅವರೊಂದಿಗೆ ನಿಂತ ದೇವರಾಜ್ ಅರಸ್ ಅವರನ್ನು ಯೂಸ್ ಆ್ಯಂಡ್ ಥ್ರೋ (Use And Throw) ಮಾಡಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದೆಲ್ಲವೂ ಗೊತ್ತಿದ್ದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಯಾಕೆ ಸೇರಿದರು ಎಂಬುದು ನನಗೆ ಇನ್ನೂ ಕೂಡಾ ಆಶ್ಚರ್ಯವಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ನಮ್ಮ ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಸಿಗುತ್ತಿದೆ. ಖಂಡಿತವಾಗಿಯೂ ಸಂಪೂರ್ಣ ಬಹುಮತದೊಂದಿಗೆ ಹೊಸ ನಾಯಕತ್ವ ಆಡಳಿತಕ್ಕೆ ಬರಲಿದೆ. ಎಲ್ಲಾ ಸಮುದಾಯಗಳು ಕೂಡಾ ನಮ್ಮ ಬೆಂಬಲಕ್ಕೆ ನಿಲ್ಲುತ್ತವೆ. ಕಾಂಗ್ರೆಸ್ ಪಕ್ಷದ ಈ ಹುನ್ನಾರ ಕೆಲವೇ ದಿನಗಳಲ್ಲಿ ಬಯಲಾಗುತ್ತದೆ ಎಂದರು.
ರಾಹುಲ್ ಗಾಂಧಿಯವರ (Rahul Gandhi) 40% ಕಮಿಷನ್ ಆರೋಪದ ಕುರಿತು ಪ್ರತಿಕ್ರಿಯಿದ ಅವರು, ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಗರಣದ ಬಗ್ಗೆ ನಾನೇ ಅವರಿಗೆ ಕಳುಹಿಸಿಕೊಟ್ಟಿದ್ದೇನೆ. 40% ಭ್ರಷ್ಟಾಚಾರದ ಚಾರ್ಜ್ಶೀಟ್ ಅವರ ಮೇಲಿದೆ. ಅದಕ್ಕೆ ಇದುವರೆಗೂ ಉತ್ತರ ಬಂದಿಲ್ಲ. ಮೊದಲು ಅವರ ಸರ್ಕಾರದಲ್ಲಿ ನಡೆದಂತಹ 40% ಭ್ರಷ್ಟಾಚಾರಕ್ಕೆ (Corruption) ಉತ್ತರ ಕೊಡಲಿ ಎಂದು ಕಿಡಿ ಕಾರಿದರು.