ಬೆಂಗಳೂರು: ದೊಡ್ಡ ನಾಯಕರೊಬ್ಬರು ಟಿಕೆಟ್ ತಪ್ಪಿಸಿದ್ದಾರೆ, ಈ ಬೆಳವಣಿಗೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾರು ಟಿಕೆಟ್ ತಪ್ಪಿಸಿದ್ದಾರೆ ಎಂಬುದನ್ನು ನೀವೇ ಯೋಚಿಸಿ. ದೊಡ್ಡ ನಾಯಕರು ಟಿಕೆಟ್ ತಪ್ಪಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನನ್ನ ಪರವಾಗಿಯೇ ಇದ್ದಾರೆ. ಜಮೀರ್ ಅಹ್ಮದ್ ಖಾನ್ ಅವರು ಕೂಡ ನನ್ನ ಪರವಾಗಿಯೇ ಇದ್ದಾರೆ. ಆದರೆ ಹಿರಿಯರೊಬ್ಬರು ಟಿಕೆಟ್ ತಪ್ಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವ ನಿರೀಕ್ಷೆ ಇಟ್ಕೊಂಡು ಕಾದು ಕುಳಿತುಕೊಳ್ಳಲಿ. ಆದರೆ ನಾನಿನ್ನೂ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ.ರಾಜೀನಾಮೆ ಕೊಟ್ಟರೆ ಪಕ್ಷದ ಕತೆ ಮುಗಿಯುತ್ತೆ ಎಂದರು. ನನಗೆ ಟಿಕೆಟ್ ಸಿಗುವ ವಿಶ್ವಾಸ ಹೋಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಜನರೇ ನನ್ನನ್ನು ಗೆಲ್ಲಿಸ್ತಾರೆ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ಕೈತಪ್ಪಲು ಕಾರಣ ಯಾರು ಎಂದು ನಾನು ನೇರವಾಗಿ ಹೇಳಲ್ಲ. ಆದರೆ ಅವರು, ನನ್ನ ಮನೆಗೆ ಬೆಂಕಿ ಇಟ್ಟವರ ಪರವಾಗಿದ್ದಾರೆ. ಆಗಲೂ ನನ್ನ ಪರ ಅವರು ನಿಲ್ಲಲಿಲ್ಲ, ಇದೀಗ ಅವರೇ ನನಗೆ ಟಿಕೆಟ್ ತಪ್ಪಿಸಿದ್ದು. ಅದು ಯಾರು ಅನ್ನೋದು ನಿಮಗೆ ಗೊತ್ತಿದೆ ಎಂದರು. ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಮೇಲೊಬ್ಬ ದೇವರಿದ್ದಾನೆ,ಅವನೇ ನೋಡಿಕೊಳ್ಳುತ್ತಾನೆ. ಯಾರು ಅನ್ಯಾಯ ಮಾಡಿದ್ದಾರೆ ಅದನ್ನು ಅವನು ನೋಡಿಕೊಳ್ಳುತ್ತಾನೆ ಎಂದು ಬೇಸರ ಹೊರ ಹಾಕಿದರು. ನನಗೆ ಅನ್ಯಾಯಾಗಿದೆ. ಆದರೆ ನನ್ನ ಜನ ಕೈಹಿಡಿತ್ತಾರೆ. ನನಗೆ ತೀವ್ರ ದುಃಖವಾಗ್ತಿದೆ. ಆದರೆ ಅದನ್ನು ಹೇಳಲು ಆಗಲ್ಲ ಎಂದರು.