ಬೆಂಗಳೂರು: ಜಗದೀಶ್ ಶೆಟ್ಟರ್ ಒಬ್ಬರು ಸ್ವಾಭಿಮಾನಿ ರಾಜಕಾರಣಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಲಿಂಗಾಯತರನ್ನು ಕಡೆಗಣಿಸಿದೆ. ಹೀಗಾಗಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಿದರು. ಅದಕ್ಕೆ ರಾಜೀನಾಮೆ ನೀಡಿದ ದಿನ ಯಡಿಯೂರಪ್ಪ ಕಣ್ಣೀರು ಹಾಕಿದರು. ಯಡಿಯೂರಪ್ಪ ಬಳಿಕ ಲಿಂಗಾಯತ ಸಮಾಜದಲ್ಲಿ ದೊಡ್ಡ ನಾಯಕ ಜಗದೀಶ್ ಶೆಟ್ಟರ್. ಬಿಜೆಪಿ ಅವರನ್ನು ನಡೆದುಕೊಂಡ ರೀತಿ ಯಾವ ನಾಯಕರಿಗೂ ಆಗಬಾರದು, ಯಾವುದೇ ಪಕ್ಷದಲ್ಲೂ ಆಗಬಾರದು. ಯಾವುದೇ ಕಾರಣ, ಆರೋಪ ಇಲ್ಲದೆ ಟಿಕೆಟ್ ತಪ್ಪಿಸಿದ್ದಾರೆ.
ಇದು ದುರುದ್ದೇಶ. ಶೆಟ್ಟರ್ ಸ್ವಾಭಿಮಾನಿ ರಾಜಕಾರಣಿ. ಸ್ವಾಭಿಮಾನಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಇವಾಗ ಅವರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಅವರ ಅಭಿಮಾನಿಗಳ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಇದು ಸಹಿಸಲಾರದ ಅವಮಾನ. ಈ ತರದ ಅನ್ಯಾಯ ಆಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುನ್ಸೂಚನೆ ಇಲ್ಲದೆ ಟಿಕೆಟ್ ನೀಡದೆ ಇರುವುದು ಘೋರ ಅವಮಾನ. ಶೆಟ್ಟರ್ ಅವರನ್ನು ತೇಜೋವಧೆ ಮಾಡಿದ್ದಾರೆ. ಅದನ್ನು ಸಹಿಸಲು ಆಗದೆ ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.