ದಾವಣಗೆರೆ: ಚನ್ನಗಿರಿ ತಾಲೂಕಿನ ತ್ಯಾವಣಿಗೆ ನೀರಾವರಿ ಇಲಾಖೆ ವ್ಯಾಪ್ತಿಯ ಭದ್ರಾ ನಾಲೆ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಯೊಂದಿಗೆ ಬೆಸ್ಕಾಂ, ಕಂದಾಯ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒಗಳ ತಂಡ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಅಳವಡಿಸಲಾಗಿದ್ದ 600ಕ್ಕೂ ಹೆಚ್ಚು ಪಂಪ್ಸೆಟ್ಗಳ ತೆರವುಗೊಳಿಸಿದರು.
ತ್ಯಾವಣಿಗೆ ನೀರಾವರಿ ಇಲಾಖೆ ಎಇಇ ಜಿ.ಎಂ. ಗುಡ್ಡಪ್ಪ ಮಾತನಾಡಿ, ತ್ಯಾವಣಿಗೆ ಶಾಖಾ ಭದ್ರಾ ನಾಲೆಗಳಲ್ಲಿಅನಧೀಕೃತವಾಗಿ ಪಂಪ್ಸೆಟ್, ಡಿಸೇಲ್ ಜನರೇಟರ್ ಮತ್ತು ಇತರ ಉಪಕರಣ ಅಳವಡಿಸಿ ನೀರು ಎತ್ತಲಾಗುತ್ತಿತ್ತು. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ಕೊನೆ ಗ್ರಾಮಗಳಿಗೆ ನೀರು ತಲುಪದೆ ರೈತರು ಕಷ್ಟ ಎದುರಿಸುತ್ತಿದ್ದಾರೆ. ಹರಿಹರ ತಾಲೂಕಿನ ಮಲೆಬೆನ್ನೂರು ರೈತರು 2015ರಲ್ಲಿ ಹೈಕೋರ್ಟ್ನಲ್ಲಿ ಭದ್ರಾ ನಾಲೆಗಳಲ್ಲಿಅಕ್ರಮವಾಗಿ ಅಳವಡಿಸಿರುವ ಪಂಪ್ಸೆಟ್ ತೆರವುಗೊಳಿಸುವಂತೆ ದೂರು ಸಲ್ಲಿಸಿದ್ದರು. ಹೈಕೋರ್ಟ್ ತೆರವಿಗೆ ಆದೇಶ ನೀಡಿತ್ತು. ಅದರಂತೆ ಈಗ ಕೊನೆ ಭಾಗದ ರೈತರು ನೀರಿಲ್ಲದೆ ಸಂಕಷ್ಟಲ್ಲಿದ್ದಾರೆ. ಹಾಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತೆರವು ಯಶಸ್ವಿ
ದಾವಣಗೆರೆ ಶಾಖಾ ಕಾಲುವೆಯಿಂದ 30 ಕಿಲೋ ಮೀಟರ್ ಸಿದ್ದನಮಠವರೆಗೆ, ಸೂಳೆಕೆರೆ, ಕೆರೆಬಿಳಚಿ, ಸೋಮ್ಲಾಪುರ, ಚನ್ನಾಪುರ, ಬೆಳ್ಳಿಗನೂಡು, ಗೆದ್ಲಹಟ್ಟಿ, ಎಕ್ಕೆಗೊಂದಿ ಸಿದ್ದನಮಠ ಗ್ರಾಮಗಳಲ್ಲಿ ಹಾದು ಹೋಗಿರುವ ನಾಲೆಗಳಲ್ಲಿಅಳವಡಿಸಿದ್ದ ಅಕ್ರಮ ಪಂಪ್ಸೆಟ್ಗಳ ತೆರವು ಕಾರ್ಯಾಚರಣೆ ನಡೆಸಿ, 600ಕ್ಕೂ ಅಧಿಕ ಪಂಪಸೆಟ್ ತೆರವುಗೊಳಿಸಲಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಬೆಸ್ಕಾಂ ಎಇಇ ಪ್ರವೀಣ್ ಕುಮಾರ್, ನೀರಾವರಿ ಇಲಾಖೆಯ ಎಇಗಳಾದ ಮಧು ಕೆ.ಜೆ., ಎಚ್.ತಿಪ್ಪೇಸ್ವಾಮಿ, ಶಾಖಾಧಿಕಾರಿ ಸಂದೀಪ್ ಸಾಗರ್ , ಆರ್ಐ ಎಂ.ಕೆ. ವಿಶ್ವನಾಥ್, ವೆಂಕಟೇಶ್ ನಾಯ್್ಕ ಇತರರು ಇದ್ದರು.
ಅಕ್ರಮ ಪಂಪ್ಸೆಟ್ ತೆರವು ಕಾರ್ಯಾಚರಣೆ ವೇಳೆಯಲ್ಲಿ ರೈತರು ಅಧಿಕಾರಿಗಳಿಗೆ ಯಾವುದೇ ಪ್ರತಿರೋಧವಿಲ್ಲದೆ ಸ್ವಯಂ ಪ್ರೇರಿತರಾಗಿ ಪಂಪ್ಸೆಟ್ಗಳನ್ನು ತೆರವುಗೊಳಿಸಿದ್ದಾರೆ. ಕೆಲ ರೈತರ ಮನವೊಲಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತ್ಯಾವಣಿಗೆ. ನೀರಾವರಿ ಇಲಾಖೆಯ ಎಇಇ ಜೆ.ಎಂ. ಗುಡ್ಡಪ್ಪ ತಿಳಿಸಿದ್ದಾರೆ.
ಚನ್ನಗಿರಿ ತಾಲೂಕಿನ ಸೂಳೆಕೆರೆ ಭದ್ರಾ ನಾಲೆಯ ದಾವಣಗೆರೆ ಶಾಖಾ ಕಾಲುವೆಯಿಂದ 30 ಕಿಲೋ ಮೀಟರ್ವರೆಗಿನ ಸಿದ್ದನಮಠವರೆಗೆ ನಾಲೆಗಳಲ್ಲಿಅಳವಡಿಸಿದ್ದ ಅಕ್ರಮ ಪಂಪ್ಸೆಟ್ ತೆರವು ಕಾರ್ಯಾಚರಣೆ ನೀರಾವರಿ, ಕಂದಾಯ, ಬೆಸ್ಕಾಂ ಅಧಿಕಾರಿ -ಸಿಬ್ಬಂದಿಗಳು ನಡೆಸಿದರು.