ಹಾವೇರಿ: ಜಗದೀಶ್ ಶೆಟ್ಟರ್ (Jagadish Shettar) ದೇಶದ ಪ್ರಧಾನಿಯಾಗಲು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil) ವ್ಯಂಗ್ಯವಾಡಿದರು.
ಹಿರೇಕೆರೂರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ (BJP) ಜಗದೀಶ್ ಶೆಟ್ಟರ್ ರಾಜ್ಯದ ಉನ್ನತ ಸ್ಥಾನಗಳನ್ನು ಅನುಭವಿಸಿ ಇಂದು ಕಾಂಗ್ರೆಸ್ (Congress) ಸೇರ್ಪಡೆ ಆಗುತ್ತಿರುವುದು ನಿಜಕ್ಕೂ ಖಂಡನೀಯ. ಬಿಜೆಪಿ ಇಷ್ಟೆಲ್ಲ ಅನುಭವಿಸಿದ ನಂತರವೂ ಹೀನಾಯ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ ಅಂದರೆ ಬಹುಶಃ ಅವರಿಗೆ ರಾಜ್ಯದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿ ಮಾಡುವ ಮಾತನ್ನು ಕಾಂಗ್ರೆಸ್ನವರು ಕೊಟ್ಟಿರಬಹುದು. ಅದಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ಬಂದಿದೆ. ಯಾರು ಬರ್ತಿರಾ ಬನ್ನಿ ಬನ್ನಿ ಅಂತಾ ಟಿಕೆಟ್ ಹಿಡ್ಕೊಂಡ್ ನಿಂತಿದ್ದಾರೆ. ಬಸ್ ಸ್ಟ್ಯಾಂಡ್ನಲ್ಲಿ ಟಿಕೆಟ್ ಎನ್ನುವ ಹಾಗೇ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡುವುದಕ್ಕೆ ನಿಂತಿದ್ದಾರೆ. ಸವದಿ, ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಖಂಡನೀಯ. ಸೋತಿದ್ರು ಸಹಿತ ಅವರನ್ನು ಡಿಸಿಎಂ ಮಾಡಿ ಎಂಎಲ್ಸಿ ಮಾಡಲಾಯಿತು. ಕುಮಟಳ್ಳಿ ಸೇರಿದಂತೆ 17 ಜನ ಪಕ್ಷ ಬಿಟ್ಟು ಬಂದಿದ್ದಕ್ಕೆ ಇವರು ಡಿಸಿಎಂ ಆಗಿದ್ದರು. ಇದನ್ನೆಲ್ಲಾ ಸವದಿಯವರು ತಿಳಿದುಕೊಂಡು ಪಕ್ಷದಲ್ಲಿ ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮೇಂದ್ರ ಪ್ರಧಾನ, ಅಮಿತ ಶಾ ಕೂಡ ಶೆಟ್ಟರ್ ಜೊತೆ ಮಾತನಾಡಿದರು. ನಿಮಗೆ ಕೇಂದ್ರದ ಸಚಿವ ಸ್ಥಾನ ಕೊಡುತ್ತೇವೆ ಎಂದು ಹೇಳಿದರು. ಇಷ್ಟೆಲ್ಲಾ ಹೇಳಿದರೂ ಸಹಿತ ಶೆಟ್ಟರ್ ರಾಜೀನಾಮೆ ಕೊಟ್ಟು ಹೋಗಿದ್ದು ನೋಡಿದರೆ ಶೆಟ್ಟರ್ ಅವರನ್ನು ಬಹುಶಃ ಕಾಂಗ್ರೆಸ್ನವರು ದೇಶದ ಪ್ರಧಾನಿ ಮಾಡಬಹುದು. ಬುಲೆಟ್ ಬೈಕ್ ಬಿಟ್ಟು ಬುಲ್ಡೊಜರ್ ಹತ್ತಬೇಕು. ಅದನ್ನು ಬಿಟ್ಟು ಸ್ಪ್ಲೆಂಡರ್ ಬೈಕ್ ಹತ್ತಿದ್ದಾರೆ ಎಂದು ಟೀಕಿಸಿದರು.