ಬಳ್ಳಾರಿ: ಮಾಜಿ ಸಚಿವ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ (Janardhan Reddy) ಬಿಜೆಪಿಯಿಂದ (BJP) ಹೊರ ಬಂದು “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” (KRPP) ವನ್ನು ಸ್ಥಾಪಿಸಿದ್ದಾರೆ. ಕಲ್ಯಾಣ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಪಕ್ಷ ಸ್ಥಾಪಿಸಿದ್ದು, ಈ ಬಾರಿಯ ಚುನಾವಣೆಗೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳನ್ನು ಸುತ್ತುತ್ತಿದ್ದು, ಇದು ರಾಷ್ಟ್ರೀಯ ಪಕ್ಷಗಳಿಗೆ ತೆಲೆನೋವಾಗಿದೆ. ಜನಾರ್ದನ ರೆಡ್ಡಿ ಪಕ್ಷ, ಬಿಜೆಪಿ ಪಾಲಿಗೆ ಮುಳುವಾಗು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಕೆಲ ಮತಗಳು ರೆಡ್ಡಿ ಪಾಲಾಗುವ ಸಂಭವವಿದೆ. ಜನಾರ್ದನ ರೆಡ್ಡಿ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧವಾಗಿದ್ದಾರೆ. ಇದರಿಂದ ಈ ಕ್ಷೇತ್ರಗಳಲ್ಲಿ ಬಿಜೆಪಿಯ ಮತಗಳು ಇಬ್ಬಾವಾಗಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಜನಾರ್ದನ ರೆಡ್ಡಿ ಈಗಾಗಲೇ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಪತ್ನಿ ಲಕ್ಮೀ ಅರುಣಾ ಅವರನ್ನು, ಬಿಜೆಪಿ ಅಭ್ಯರ್ಥಿ, ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಕಣಕ್ಕಿಳಿಸಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ಅತ್ತೆ ಮತ್ತು ಮೈದುನ ನಡುವೆ ಪೈಪೋಟಿ ಏರ್ಪಟ್ಟಿದೆ.
ಇನ್ನು ರಾಜ್ಯ ವಿಧಾನಸಭೆ ಚುನಾವಣೆಯ ಕದನಕ್ಕೆ ಕಲಿಗಳು ಸಜ್ಜಾಗುತ್ತಿದ್ದು, ಸ್ಪರ್ಧೆಗೆ ನೊಂದಾಯಿಸಿಕೊಳ್ಳುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಕೂಡಾ ನಾಮಪತ್ರ ಸಲ್ಲಿಸಿಸುತ್ತಿದ್ದಾರೆ. ಅದರಂತೆ ಇಂದು (ಏ.17) ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಕೆಆರ್ಪಿಪಿ ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಬೃಹತ್ ಮೆರವಣಿಗೆ ಮಾಡಿದ್ದು, ನಂತರ ಪಾಲಿಕೆ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸುವ ಮೂಲಕ ಮೈದುನ ಸೋಮಶೇಖರ್ ರೆಡ್ಡಿ ಅವರಿಗೆ, ಈ ಬಾರಿ ವಿಜಯಪತಾಕೆ ನಾನೆ ಹಾರಿಸುವುದು ಎಂದಿದ್ದಾರೆ. ಲಕ್ಷ್ಮೀ ಅರುಣಾ ಅವರು ನಾಮಪತ್ರ ಸಲ್ಲಿಕೆ ವೇಳೆ ತಂದೆ ಪರಮೇಶ್ವರ ರೆಡ್ಡಿ, ತಾಯಿ ನಾಗಲಕ್ಷ್ಮೀ. ಪುತ್ರಿ ಬ್ರಹ್ಮಣಿ, ಅಳಿಯ ರಾಜೀವ ರೆಡ್ಡಿ ಸಾಥ್ ನೀಡಿದ್ದಾರೆ.
ತೋರಿಕೆಯ ಫೈಟ್?
ಮೊತ್ತೊಂದಡೆ ಲಕ್ಷ್ಮೀ ಅರಣಾ ಸ್ಪರ್ಧೆ ತೋರಿಕೆಯ ಫೈಟ್ ಎಂದು ಹೇಳಲಾಗುತ್ತಿದೆ. ಬಹಿರಂಗವಾಗಿ, ಪತ್ನಿಯನ್ನು ಜನಾರ್ದನ ರೆಡ್ಡಿ ಕಣಕ್ಕಿಳಿಸಿರುವುದು ಸಹೋದರನಿಗೆ ಮಾಡಿರುವ ಚಾಲೆಂಜ್ ಎಂತಲೇ ಕಾಣಿಸಿದೆ. ಜನಾರ್ದನ ರೆಡ್ಡಿಯ ಮಾತುಗಳೂ ಅದೇ ಅರ್ಥ ಬರುವಂತಿದ್ದವು. ಆದರೆ ಇದು ತೋರಿಕೆಗಾಗಿ ಮಾತ್ರವೇ ಕುಟುಂಬದವರ ನಡುವಿನ ಕದನವಾಗಿದೆಯೇ, ಇದೂ ಒಂದು ಗೇಮ್ ಪ್ಲಾನ್ ಆಗಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ಬಿಜೆಪಿಗೂ ಕೆಆರ್ಪಿಪಿ ಹೊಡೆತ ಕೊಡಬೇಕೆಂದಿದೆಯೇ ಅಥವಾ ಕಾಂಗ್ರೆಸ್ ಹೊಡೆತ ಕೊಡಬೇಕೆಂಬುದ ಉದ್ದೇಶವೇ ಎಂಬ ಅನುಮಾನಗಳೂ ಇನ್ನೂ ದಡೆಯಲ್ಲಿ ವ್ಯಕ್ತವಾಗುತ್ತಿವೆ.
ರೆಡ್ಡಿಯಿಂದ ಬೆಳೆದವರೇ ಇಂದು ಅವರನ್ನ ದೂರಮಾಡಿದ್ದಾರೆ
ಕೆಲ ದಿನಗಳಹಿಂದೆ ಕೆಆರ್ಪಿಪಿ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮೈದುನ ಸೋಮಶೇಖರ ರೆಡ್ಡಿ ಮತ್ತು ಸಚಿವ, ಜನಾರ್ದನ ರೆಡ್ಡಿ ಗೆಳೆಯ ಶ್ರೀರಾಮುಲು ವಿರುದ್ಧ ಗುಡುಗಿದ್ದರು. ನನ್ನ ಪತಿ ಗಾಲಿ ಜನಾರ್ದನ ರೆಡ್ಡಿ ಹಲವು ನಾಯಕರನ್ನು ಬೆಳೆಸಿದ್ದಾರೆ. ಗ್ರಾ.ಪಂ. ಸದಸ್ಯರಿಂದ ಹಿಡಿದು ಮುಖ್ಯಮಂತ್ರಿ ಮಾಡಿದ್ದಾರೆ. ರೆಡ್ಡಿ ಹೇಳಿದಂತೆ ರಾಜಕೀಯ ಅಂದ್ರೆ ಮೋಸ, ತಂತ್ರ, ಕುತಂತ್ರ. ರಾಜಕೀಯದಲ್ಲಿ ಸ್ನೇಹ ಸಂಬಂಧ ಲೆಕ್ಕಕ್ಕೇ ಬರಲ್ಲ ಅಂತಾ ಹೇಳುತ್ತಾರೆ. ರೆಡ್ಡಿಯಿಂದ ಬೆಳೆದವರೇ ಇಂದು ಅವರನ್ನ ದೂರಮಾಡಿ ಹೋಗಿದ್ದಾರೆ ಎಂದು ಸೋಮಶೇಖರ ರೆಡ್ಡಿ, ಶ್ರೀರಾಮುಲು ವಿರುದ್ಧ ಲಕ್ಷ್ಮೀ ಪರೋಕ್ಷ ವಾಗ್ದಾಳಿ ಮಾಡಿದ್ದರು.