ಹುಬ್ಬಳ್ಳಿ: ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ತಮ್ಮ ಹುಬ್ಬಳ್ಳಿಯಲ್ಲಿರುವ (Hubballi) ನಿವಾಸಕ್ಕೆ ಆಗಮಿಸುತ್ತಲೇ ಅವರ ಪತ್ನಿ ಶಿಲ್ಪಾ ಜಗದೀಶ್ (Shilpa Jagadish) ಅವರು ತಮ್ಮ ಪತಿಯನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ.
ಶೆಟ್ಟರ್ ಹುಬ್ಬಳ್ಳಿಯ ಮಧುರಾ ಎಸ್ಟೇಟ್ನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸುತ್ತಲೇ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇಷ್ಟು ದಿನ ಬಿಜೆಪಿ ಘೋಷಣೆ ಕೂಗುತ್ತಿದ್ದ ಬೆಂಗಲಿಗರು ಇಂದು ಕಾಂಗ್ರೆಸ್ ಘೋಷಣೆ ಕೂಗಿದ್ದಾರೆ. ಈ ವೇಳೆ ಭಾವುಕರಾದ ಶೆಟ್ಟರ್ ಪತ್ನಿ ಶಿಲ್ಪಾ ಜಗದೀಶ್ ಪತಿಯನ್ನು ತಬ್ಬಿ ಕಣ್ಣೀರು ಹಾಕಿದರು. ಪತ್ನಿಗೆ ಸಮಾಧಾನಪಡಿಸಲು ಮುಂದಾದ ಶೆಟ್ಟರ್ ಕೂಡಾ ಈ ವೇಳೆ ಗದ್ಗದಿತರಾದರು. ಇಬ್ಬರು ಕಣ್ಣೀರು ಹಾಕಿದ್ದನ್ನು ನೋಡಿದ ಶೆಟ್ಟರ್ ಬೆಂಬಲಿಗರು ಕೂಡಾ ಕಣ್ಣೀರಾಗಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಇಂದು ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಕಳೆದ ಹಲವಾರು ತಿಂಗಳುಗಳಿಂದ ನನಗೆ ತೊಂದರೆ ಕೊಡುವ ಕೆಲಸ ಆಗಿದೆ. ಬಿಜೆಪಿಯಲ್ಲಿ ಅಪಮಾನ ಆಗುವ ರೀತಿ ನಡೆದುಕೊಂಡಿದ್ದಾರೆ. ಹೀಗಾಗಿ ಮನನೊಂದು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದು ತಿಳಿಸಿದರು.
ನನಗೆ ಬಿಜೆಪಿ ಪಕ್ಷ ಬಿಡುವ ಆಸೆ ಎಂದೂ ಇರಲಿಲ್ಲ. ಆದರೆ ನನ್ನ ಮನೆಯಿಂದ ಹೊರ ಹಾಕುವ ಪ್ರಯತ್ನ ಆಗಿತ್ತು. ನಾನು ಕಾಂಗ್ರೆಸ್ಗೆ ಯಾವುದೇ ಕರಾರು ಹಾಕಿಲ್ಲ. ನನ್ನನ್ನು ಗೌರವದಿಂದ ನೋಡಿಕೊಂಡರೆ ಸಾಕು ಎಂದು ಹೇಳಿದ್ದೇನೆ. ನನಗೆ ಕಾಂಗ್ರೆಸ್ ನಾಯಕರು ಹೃದಯಸ್ಪರ್ಶಿ ಸ್ವಾಗತ ಮಾಡಿಕೊಂಡಿದ್ದಾರೆ. ನಾನು ಬಿಜೆಪಿಯನ್ನು ಬೈಯಲ್ಲ. ಕೆಲವೊಂದು ನಾಯಕರ ಹಿಡಿತದಲ್ಲಿ ಬಿಜೆಪಿ ಇದೆ ಎಂದು ಶೆಟ್ಟರ್ ಹೇಳಿದರು.
ಏಪ್ರಿಲ್ 19ರಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಅಂದು ದೊಡ್ಡ ಪ್ರಮಾಣದ ಜನರು ಬರುತ್ತಾರೆ. 8-10 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. 5 ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶೆಟ್ಟರ್ 6ನೇ ಬಾರಿ ಕಾಂಗ್ರೆಸ್ನಿಂದ ಕಣಕ್ಕೆ ಇಳಿಯುತ್ತಿದ್ದಾರೆ.