ಬೀದರ್ (ಏ.17): ಏ.18ರಂದು ಮಂಗಳವಾರ ನಾನು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.
2023ರ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆಯ ವಿಷಯವಾಗಿ ಸೋಮವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಮಂಗಳವಾರ 18ನೇ ತಾರೀಖು ಬೆಳಗ್ಗೆ 11 ಗಂಟೆಗೆ ಬೀದರ್ ನಗರದ ಒಲ್ಡ್ ಸಿಟಿ (ಹಳೆ ಸರ್ಕಾರಿ ಆಸ್ಪತ್ರೆ ಹತ್ತಿರ) ಯಲ್ಲಿರುವ ನಮ್ಮ ನಿವಾಸದಿಂದ ಪಾದಯಾತ್ರೆಯ ಮೂಲಕ ತಹಶಿಲ್ ಆಫೀಸ್ ಗೆ ಹೋಗಿ ಜಾತ್ಯಾತೀತ ಜನತಾದಳ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ತಾವೆಲ್ಲರೂ ಬಂದು ಆಶೀರ್ವಾದ ಮಾಡಬೇಕೆಂದು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ದೇವರ ದರ್ಶನ:
ಭವಾನಿ ಮಾತೆಯ ಅಪ್ಪಟ ಭಕ್ತರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಭವಾನಿ ಮಾತೆಯ ವಾರವಾಗಿರುವ ಮಂಗಳವಾರದಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಭವಾನಿ ಮಾತೆ ಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.