ಧಾರವಾಡ: 2023ನೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಈ ಬಾರಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ನವಲಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಈ ಬಾರಿ ಸರಳ ಬಹುಮತಕ್ಕಿಂತ 15 ಸೀಟುಗಳು ಹೆಚ್ಚಿಗೆ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗಳು ಆರಂಭವಾಗಲಿವೆ. ಅಮಿತ್ ಶಾ ಸಹ ಭಾಗಿಯಾಗಲಿದ್ದಾರೆ. ಏ.21ಕ್ಕೆ ರ್ಯಾಲಿಗಳು ಎಲ್ಲೆಲ್ಲಿ ನಡೆಯಲಿವೆ ಎಂಬುದು ಫೈನಲ್ ಆಗಲಿವೆ. ಏ.19ಕ್ಕೆ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಿಎಂ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಅದೇ ವೇಳೆ ಹುಬ್ಬಳ್ಳಿಯಲ್ಲಿ ಎರಡು ಕಾರ್ಯಕ್ರಮ ನಡೆಯಲಿವೆ. ಉಳಿದ 12 ಅಭ್ಯರ್ಥಿಗಳ ಘೋಷಣೆ ಸಹ ಆಗಲಿದೆ ಎಂದರು. ಜಗದೀಶ ಶೆಟ್ಟರ್ ಅವರು ಪಕ್ಷ ಬಿಟ್ಟು ಹೋಗಬಾರದಿತ್ತು. ಆದರೆ, ಹೋಗಿದ್ದಾರೆ. ಪಕ್ಷ ಬಲಪಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ. ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರು ಕೂಡ ನಡ್ಡಾ ಬಂದ ವೇಳೆ ಪ್ರಕಟಗೊಳ್ಳಲಿದೆ ಎಂದರು.