ಮಂಡ್ಯ : ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಮದ್ದೂರು ತಾಲ್ಲೂಕು ಕಛೇರಿಗೆ ತೆರಳಿ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಮುನ್ನ ಸಂಸದೆ ಸುಮಲತಾ ಅಂಬರೀಶ್ ಮೆರವಣಿಗೆಯಲ್ಲಿ ಪಾಲ್ಗೊಂಡು ಎಸ್.ಪಿ.ಸ್ವಾಮಿ ಪರ ಪ್ರಚಾರ ನಡೆಸಿ ಚುನಾವಣೆಯಲ್ಲಿ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿವಂತೆ ಮನವಿ ಮಾಡಿದರು.
ಇದಕ್ಕೂ ಮೊದಲು ಅಭ್ಯರ್ಥಿ ಎಸ್.ಪಿ.ಸ್ವಾಮಿ ಪತ್ನಿ ಜಿ.ಪಂ ಮಾಜಿ ಅಧ್ಯಕ್ಷೆ ನಾಗರತ್ನ ತಮ್ಮ ಕುಟುಂಬದವರೊಂದಿಗೆ ಮನೆ ದೇವರು ಮಾಲಗಾರನಹಳ್ಳಿಯ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಾಮಪತ್ರವನ್ನು ದೇವರ ಪಾದ ಬಳಿಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮದ್ದೂರಿನ ಶ್ರೀ ಹೊಳೆ ಆಂಜನೇಯ ಸ್ವಾಮಿ, ಮದ್ದೂರಮ್ಮ, ಕಾಶಿ ವಿಶ್ವೇಶ್ವರ ಸ್ವಾಮಿ ಹಾಗೂ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣೆಯಲ್ಲಿ ಜಯಲಭಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಬಳಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಬಿಜೆಪಿ ಶಾಲು ಹಾಗೂ ಬಾವುಟ ಹಿಡಿದು ಸಂಸದೆ ಸುಮಲತಾ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಅಭ್ಯರ್ಥಿ ಎಸ್.ಪಿ.ಸ್ವಾಮಿ ಪರ ಘೋಷಣೆಗಳನ್ನು ಕೂಗಿದರು.
ನಂತರ ಜಾನಪದ ಕಲಾ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳ ಮೂಲಕ ತಾಲ್ಲೂಕು ಕಛೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ, ಸುಮಾರು 1 ಗಂಟೆ ವೇಳೆಗೆ ಚುನಾವಣಾಧಿಕಾರಿ ಆರ್.ನಾಗರಾಜ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆ ಸುಮಲತಾ ಅವರು ನನ್ನ ಪರ ಪ್ರಚಾರಕ್ಕೆ ಬಂದಿರುವುದು ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ಸಂಸದೆ ಸುಮಲತಾ ಅವರು ನನ್ನ ಜೊತೆ ಶಕ್ತಿಯಾಗಿ ನಿಂತುಕೊಂಡು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಚುನಾವಣೆಯಲ್ಲಿ ದಿ. ಅಂಬರೀಶ್ ಆಶೀರ್ವಾದದ ಜೊತೆಗೆ ಸುಮಲತಾ ಬೆಂಬಲವು ದೊರಕಿದ್ದು, ಸಹಜವಾಗಿ ಅಂಬರೀಶ್ ಬೆಂಬಲಿಗರು ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡಲಿದ್ದಾರೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.
ನಾನು ನನ್ನ ರಾಜಕೀಯ ಜೀವನದಲ್ಲಿ ಸಮಾಜಸೇವೆ ಮಾಡಿಕೊಂಡು ಬಡ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಜಿ.ಪಂ ಮಾಜಿ ಸದಸ್ಯ ಸಾದೊಳಲು ಕೃಷ್ಣೇಗೌಡ, ಬೋರಯ್ಯ, ರೈತ ಮೋರ್ಚಾ ಅಧ್ಯಕ್ಷ ಶಿವದಾಸ್ ಸತೀಶ್ ಮುಖಂಡರಾದ ಮನುಕುಮಾರ್, ಜಿ.ಸಿ.ಮಹೇಂದ್ರ, ಡಾಬಾ ಕಿಟ್ಟಿ, ಹಾಗಲಹಳ್ಳಿ ರಘು, ಮಧುಕುಮಾರ್, ನಗರಕೆರೆ ಪ್ರಸನ್ನ, ಶಿವರಾಂ, ಲಿಂಗರಾಜು, ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ