ಬೆಂಗಳೂರು: ಐಪಿಎಲ್ ಇತಿಹಾಸದ ಬದ್ದ ಎದುರಾಳಿಗಳೆಂದೇ ಬಿಂಬಿತವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಕಾದಾಟಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ, ಚೆನ್ನೈ-ಬೆಂಗಳೂರು ಪಂದ್ಯದ ಭವಿಷ್ಯ ನುಡಿದಿದ್ದಾರೆ. ಇವತ್ತು ನನ್ನ ಬೆಂಬಲ RCB ಗೆ. ನನ್ನ ಪ್ರಕಾರ, ಇವತ್ತಿನ ಪಂದ್ಯದಲ್ಲಿ ವೆಯ್ನ ಪಾರ್ನೆಲ್ ಮೇಲೆ ತುಂಬಾ ಭರವಸೆ ಇಟ್ಟಿದ್ದಿನಿ. ಮ್ಯಾಕ್ಸವೇಲ್ ಸಹ ಇಂದಿನ ಪಂದ್ಯದಲ್ಲಿ ತುಂಬಾ ಒಳ್ಳೆಯ ಆಟ ಆಡಬಹುದು.
ಇಂದಿನ ಪಂದ್ಯ ಬಹಳ ಕುತೂಹಲ ಪಂದ್ಯ, ಕೊನೆಯ ಓವರ್ವರೆಗೂ ಪಂದ್ಯ ಕುತೂಹಲವಾಗಿರಲಿದೆ” ಎಂದು ಆರ್ಯವರ್ಧನ ಗುರೂಜಿ ಭವಿಷ್ಯ ನುಡಿದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಒಟ್ಟಾರೆ 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರ್ಸಿಬಿ ಎದುರು ಸ್ಪಷ್ಟ ಮೇಲುಗೈ ಸಾಧಿಸಿದೆ. 30 ಪಂದ್ಯಗಳ ಪೈಕಿ ಧೋನಿ ನೇತೃತ್ವದ ಚೆನ್ನೈ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.