ಬೀದರ್: ವಿಶ್ವಗುರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ (Basavakalyan) ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಬಿಜೆಪಿಯಿಂದ (BJP)ಮತ್ತೊಮ್ಮೆ ಶರಣು ಸಲಗರ್ (Sharanu Salagar) ಅಗ್ನಿ ಪರೀಕ್ಷೆಗೆ ಇಳಿದರೆ ಕಾಂಗ್ರೆಸ್ನಿಂದ (Congress) ಮಾಜಿ ಸಿಎಂ ಎನ್ ಧರಂ ಸಿಂಗ್ (Dharam Singh) ಪುತ್ರ ವಿಜಯ್ ಸಿಂಗ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ನಿಂದ (JDS) ಈಗಾಗಲೇ ಸೈಯದ್ ಯಾಸ್ರಬ್ ಅಲಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಬಸವಕಲ್ಯಾಣ ಕ್ಷೇತ್ರದಲ್ಲಿ ಹುಲಸೂರು ಮತ ಕ್ಷೇತ್ರದ ಕೆಲವು ಗ್ರಾಮಗಳ ವಿಲೀನಗೊಂಡಿದೆ. ಹೀಗಾಗಿ ಕ್ಷೇತ್ರದ ಸ್ವರೂಪವೂ ಬದಲಾಗಿದೆ. ಒಟ್ಟಾರೆ ಬಸವಕಲ್ಯಾಣ ಕ್ಷೇತ್ರ ಜಿಲ್ಲೆಯ ಪ್ರಮುಖ ರಾಜಕೀಯ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ.
1957ರಿಂದ ಬಸವಕಲ್ಯಾಣ ಕ್ಷೇತ್ರ ಒಟ್ಟು 15 ಚುನಾವಣೆಗಳನ್ನು ಕಂಡಿದ್ದು 16ನೇ ಚುನಾವಣೆಗೆ ಕ್ಷೇತ್ರದಲ್ಲಿ 2.41 ಲಕ್ಷ ಮತದಾರರಿದ್ದಾರೆ. ಮತದಾರ 5 ಬಾರಿ ಕಾಂಗ್ರೆಸ್ನ ಕೈ ಹಿಡಿದರೆ, 7 ಬಾರಿ ಜನತಾ ಪರಿವಾರಕ್ಕೆ ಮಣೆ ಹಾಕಿದ್ದಾನೆ. ಒಂದು ಬಾರಿ ಪಕ್ಷೇತರ, ಎರಡು ಸಲ ಕಮಲ ಅರಳಿದೆ. ಜಿಲ್ಲೆಯಲ್ಲೇ ಮೊದಲ ಬಾರಿ ಮಹಿಳಾ ಪ್ರತಿನಿಧಿಯನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ ಸಮಾನತೆ ಸಾರಿದ ಕ್ಷೇತ್ರ ಎನ್ನುವುದು ವಿಶೇಷ.
ಬಸವಕಲ್ಯಾಣ ಕ್ಷೇತ್ರದದಲ್ಲಿ ಈಗ ಅನುಭವ ಮಂಟಪ ಕಾಮಗಾರಿ ಭರದಿಂದ ಸಾಗುತ್ತಿದ್ದು ಜನತಾ ಪರಿವಾರದಿಂದ ಬಸವರಾಜ ಪಾಟೀಲ್ ಅಟ್ಟೂರು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ಒಂದು ಬಾರಿ ಉಪ ಚುನಾವಣೆ ನಡೆದಿದೆ.
2018ರಲ್ಲಿ ಶೇ.42.27ರಷ್ಟು ಮತ ಪಡೆದು ಕಾಂಗ್ರೆಸ್ನ ಬಿ. ನಾರಾಯಣರಾವ್ (B. Narayan Rao) ಗೆಲುವು ಪಡೆದಿದ್ದರು. ಬಿಜೆಪಿಯ ಮಲ್ಲಿಕಾರ್ಜುನ ಖೂಬಾಗೆ ಶೇ.30.38 ರಷ್ಟು ಮತ ಬಿದ್ದರೆ ಜೆಡಿಎಸ್ ಪಿಜಿ ಆರ್ ಸಿಂಧಿಯಾ 21.62 ರಷ್ಟು ಮತ ಪಡೆದಿದ್ದರು. 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಶೇ.41.17ರಷ್ಟು ಮತ ಪಡೆದು ಗೆದ್ದರೆ ಕಾಂಗ್ರೆಸ್ನ ಮಾಲಾ ಬಿ ನಾರಾಯಣರಾವ್ ಶೇ.34.17 ಮತಗಳನ್ನು ಪಡೆದು ಎರಡನೇಯ ಸ್ಥಾನ ಪಡೆದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 2,43,089 ಮತದಾರರು ಇದ್ದು ಇದರಲ್ಲಿ 1,26,681 ಪುರುಷ ಮತದಾರರು ಹಾಗೂ 1,16,408 ಮಹಿಳಾ ಮತದಾರರು ಇದ್ದಾರೆ. 60 ಸಾವಿರ ಲಿಂಗಾಯತ, 45 ಸಾವಿರ ಮರಾಠ, 50 ಸಾವಿರ ಮುಸ್ಲಿಂ, 35 ಸಾವಿರ ಎಸ್ಸಿ, 15 ಸಾವಿರ ಎಸ್ಟಿ, 18 ಸಾವಿರ ಕೋಳಿ, ಇತರೆ 20 ಸಾವಿರ ಮತದಾರರು ಇದ್ದಾರೆ. ಒಟ್ಟಾರೆಯಾಗಿ ಲಿಂಗಾಯತರು, ಮುಸ್ಲಿಮರು ಹಾಗೂ ಮರಾಠಿಗ ಮತದಾರರೇ ಇಲ್ಲಿ ಪಕ್ಷಗಳ ಗೆಲುವಿಗೆ ನಿರ್ಣಾಯಕ.
ಬಿಜೆಪಿ ಧನಾತ್ಮಕ ಅಂಶಗಳು
ಚುನಾವಣಾ ಚಾಣಕ್ಯ ಅಮಿತ್ ಶಾ ಕಲ್ಯಾಣ ಅನುಭವ ಮಂಟಪದಿಂದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಕೊಟ್ಟಿದ್ದು ಬಿಜೆಪಿಗೆ ವರದಾನ. ಎಲ್ಲರ ಜೊತೆ ಕೆಲಸ ಮಾಡುವ ಬಿಜೆಪಿಯ ಶರಣು ಸಲಗರ್ ಕಡೆ ಜನರ ಒಲವಿದೆ. ಕಲ್ಯಾಣದ ನೂತನ ಅನುಭವ ಮಂಟಪಕ್ಕೆ ಬಿಜೆಪಿ ಸರ್ಕಾರ 500 ಕೋಟಿ ರೂ. ಅನುದಾನ ನೀಡಿದ್ದು ಕಾಮಗಾರಿ ಕಾರ್ಯ ಭರದಿಂದ ಸಾಗುತ್ತಿದ್ದು ಲಿಂಗಾಯತರ ಮತಗಳು ಬಿಜೆಪಿಗೆ ಬೀಳಬಹುದು. ಮರಾಠಿಗರನ್ನು ಸೆಳೆಯಲು ಶಿವಾಜಿ ಪಾರ್ಕ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತಂದು ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ.
ಬಿಜೆಪಿ ಋಣಾತ್ಮಕ ಅಂಶಗಳು
ಕಾಂಗ್ರೆಸ್ನಿಂದ ವಿಜಯ್ ಸಿಂಗ್ಗೆ ಟಿಕೆಟ್ ಸಿಕ್ಕಿದ್ದರಿಂದ ನೇರಾನೇರ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಕೊನೆಯ ಕ್ಷಣದಲ್ಲಿ ಜೆಡಿಎಸ್ನಿಂದ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ಸಿಕ್ಕರೆ ತ್ರಿಕೋನ ಸ್ಪರ್ಧೆ ನಡೆಯಬಹುದು. ಕಳೆದ ಬಾರಿ ಟಿಕೆಟ್ ಸಿಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ಶಾಸಕ ಸಲಗರ್ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಹಿನ್ನಡೆಯಾಬಹುದು. ಕಾಂಗ್ರೆಸ್ ಮಾಜಿ ಸಿಎಂ ಪುತ್ರನಿಗೆ ಟಿಕೆಟ್ ಸಿಕ್ಕಿದ್ದು ಮರಾಠ, ಅಲ್ಪಸಂಖ್ಯಾತರು, ಒಬಿಸಿ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಧನಾತ್ಮಕ ಅಂಶಗಳು
ಮಾಜಿ ಸಿಎಂ ಧರಂಸಿಂಗ್ ಪುತ್ರ ವಿಜಯ್ ಸಿಂಗ್ಗೆ ಟಿಕೆಟ್ ಸಿಕ್ಕಿದೆ. ಮರಾಠರು, ಅಲ್ಪಸಂಖ್ಯಾತರು ಹಾಗೂ ಒಬಿಸಿ ಮತದಾರರು ಹೆಚ್ಚಾಗಿದ್ದಾರೆ. ವಿಜಯ್ ಸಿಂಗ್ ತಮ್ಮದೇಯಾದ ಕಾರ್ಯಕರ್ತರ ಹಾಗೂ ಯುವಕರ ಪಡೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ.
ಮಲ್ಲಿಕಾರ್ಜುನ ಖೂಬಾ ಜೆಡಿಎಸ್ಗೆ ಮತ್ತೆ ಬಂದಿದ್ದು ಟಿಕೆಟ್ ಸಿಕ್ಕರೆ ಕಾಂಗ್ರೆಸ್ ಮತಗಳು ಜೆಡಿಎಸ್ ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. ಈ ಬಾರಿ ದಿವಂಗತ ಬಿ. ನಾರಾಯಣರಾವ್ ಅನುಕಂಪ ಮತಗಳು ಕಾಂಗ್ರೆಸ್ಗೆ ಬೀಳುವುದು ಅನುಮಾನ. ನೂತನ ಅನುಭವ ಮಂಟಪ ಸೇರಿದಂತೆ ವಿವಿಧ ಬಿಜೆಪಿ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ಗೆ ಹಿನ್ನಡೆಯಾಗಬಹುದು.
ಜೆಡಿಎಸ್ ಧನಾತ್ಮಕ ಅಂಶಗಳು
ವಿಜಯ್ ಸಿಂಗ್ಗೆ ಕಾಂಗ್ರೆಸ್ ನಿಂದ ಟಿಕೆಟ್ ಘೋಷಣೆಯಾಗಿದ್ದು ಲಿಂಗಾಯತ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಜೆಡಿಎಸ್ ಋಣಾತ್ಮಕ ಅಂಶಗಳು
ಕಲ್ಯಾಣ ನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಯಾತ್ರೆಗಳನ್ನು ಮಾಡಿದರೂ ಜೆಡಿಎಸ್ನಿಂದ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ನಡೆದಿಲ್ಲ. ಇನ್ನೂ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದರೂ ಯಾರಿಗೆ ಬಿ ಫಾರಂ ಸಿಗುತ್ತದೆ ಎಂಬ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿಗೆ ಬಿದ್ದಂತೆ ಪ್ರಚಾರ ಮಾಡುತ್ತಿದ್ದರೂ ಜೆಡಿಎಸ್ನಿಂದ ದೊಡ್ಡ ಮಟ್ಟದ ಪ್ರಚಾರ ನಡೆದಿಲ್ಲ.