ಮುಂಬೈ: ಮಹಾರಾಷ್ಟ್ರದ ಮುಂಬೈನ ದಾದರ್ ಪ್ರದೇಶದಲ್ಲಿ 18 ವರ್ಷದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಒಬ್ಬರ ಬಳಿ ಕೆಲಸ ಮಾಡುತ್ತಿದ್ದು, ಆರು ತಿಂಗಳ ಸಂಬಳ ನೀಡಿರಲಿಲ್ಲ. ಈ ಹಣವನ್ನು ಕೇಳಿದಾಗ ಹಣ ನಿಡುವ ಬದಲು ಯುವಕನ ತಲೆ ಬೋಳಿಸಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ. ಇದರಿಂದ ಮನನೊಂದು ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎನ್.ಎಂ ಜೋಶಿ ಮಾರ್ಗ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ರಾಮ್ರಾಜ್ ಜೈಸ್ವರ್ ಅವರ ಪುತ್ರ ಪಂಕಜ್ ಮೃತ ಯುವಕನಾಗಿದ್ದಾನೆ. ಪಂಕಜ್ನ್ನು (Pankaj) ನಾಯರ್ ಆಸ್ಪತ್ರೆಗೆ (Nair Hospital) ದಾಖಲಿಸಲಾಗಿತ್ತು. ಅಲ್ಲಿ ಹೋಗಿ ನೊಡಿದಾಗ, ಆತನ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸಿ ತಲೆಗೆ ಬೂದಿ ಬಳಿಯಲಾಗಿತ್ತು. ಅಲ್ಲದೇ ಸಾವಿಗೂ ಮೊದಲು ಆತನನ್ನು ಸಂಪೂರ್ಣ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿತ್ತು ಎಂದು ಪಂಕಜ್ ತಂದೆ ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎನ್ಎಂ ಮಾರ್ಗ್ (N.M. Marg) ಪೊಲೀಸರನ್ನು ಸಂಪರ್ಕಿಸಿದಾಗ ಅಲ್ಲಿನ ಇನ್ಸ್ಪೆಕ್ಟರ್ ಸುನೀಲ್ ಚಂದ್ರಮೋರೆ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು (unnatural death)ಪ್ರಕರಣ ದಾಖಲಾಗಿದೆ. ನಾವು ಸಾಕ್ಷ್ಯಗಳಿಗಾಗಿ ಹುಡುಕಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಪಂಕಜ್ನ ಕುಟುಂಬ ವಾರಣಾಸಿ ಮೂಲದವರಾಗಿದ್ದು, 2022ರ ಮಧ್ಯಭಾಗದಿಂದ ಕಮ್ಗಾರ್ ನಗರದ ಪ್ರಭಾದೇವಿ ನಿವಾಸದಲ್ಲಿ ವಾಸ ಮಾಡುತ್ತಿತ್ತು. ಪಂಕಜ್ ತಂದೆ ರಾಮ್ರಾಜ್ (Ramraj) ಅವರು ಟ್ರಾವೆಲ್ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ವಾರಣಾಸಿಯಿಂದ (Varanasi) ಮುಂಬೈಗೆ (Mumbai) ಬಂದ ನಂತರ ಪಂಕಜ್ ಸ್ಥಳೀಯ ದಿನಸಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ. ಆತನಿಗೆ ತಿಂಗಳಿಗೆ 12 ಸಾವಿರ ಸಂಬಳ ನೀಡುವುದಾಗಿ ದಿನಸಿ ಅಂಗಡಿ ಮಾಲೀಕರು ಹೇಳಿದ್ದರು. ಆದರೆ ಆತನಿಗೆ ಅಂಗಡಿಯವರು ಹೇಳಿದಷ್ಟು ಹಣ ನೀಡಿರಲಿಲ್ಲ.
ಅಲ್ಲಿ 5 ರಿಂದ 6 ತಿಂಗಳು ಕೆಲಸ ಮಾಡಿದ್ದ ಪಂಕಜ್ ನಂತರ ಈ ವರ್ಷದ ಆರಂಭದಲ್ಲಿ ಅಲ್ಲಿ ಕೆಲಸ ಬಿಟ್ಟಿದ್ದ. ನಂತರ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಮಾರ್ಚ್ನಲ್ಲಿ ಈತ ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲೀಕನ ಸಹೋದರ ಮತ್ತೆ ಪಂಕಜ್ನನ್ನು ಸಂಪರ್ಕಿಸಿ ತನ್ನ ಪಾನ್ ಶಾಪ್ನಲ್ಲಿ ಕೆಲಸ ಮಾಡುವಂತೆ ಕೇಳಿದ್ದ. ಪಂಕಜ್ ಅವರ ಆಫರ್ ಅನ್ನು ಸ್ವೀಕರಿಸಿ ಅಲ್ಲಿ ಕೆಲಸ ಮಾಡಲು ಶುರು ಮಾಡಿದ್ದ. ಈ ವೇಳೆ ಪಂಕಜ್ ಆಗಾಗ ತನ್ನ ಹಳೇ ವೇತನವನ್ನು ನೀಡುವಂತೆ ಅವರ ಬಳಿ ಕೇಳುತ್ತಿದ್ದ.
ಹಾಗೆಯೇ ಆತ ಗುರುವಾರ ಮಧ್ಯಾಹ್ನ ಕೂಡ ತನ್ನ ಸ್ಯಾಲರಿ ನೀಡುವಂತೆ ಕೇಳಿದ್ದು, ಇದರಿಂದ ಸಿಟ್ಟಿಗೆದ್ದ ಆತನ ಮಾಲೀಕ ಹಾಗೂ ಆತನ ಮನೆಯವರು ಸೇರಿ ಆತನನ್ನು ಸಮೀಪದ ಸಲೂನ್ಗೆ ಕರೆದೊಯ್ದು ಆತನ ತಲೆ ಬೋಳಿಸಿದ್ದಾರೆ. ಅಲ್ಲದೇ ಆತನ ಮುಖ ಹಾಗೂ ತಲೆಗೆ ಬೂದಿಯನ್ನು ಬಳಿದು ಕಪ್ಪಗಾಗಿಸಿದ್ದಾರೆ. ಅಲ್ಲದೇ ಆತನ ಬಟ್ಟೆಯನ್ನು ಒತ್ತಾಯಪೂರ್ವಕವಾಗಿ ತೆಗೆದು ಆತನನ್ನು ಆ ಪ್ರದೇಶದಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ.
ಹೀಗೆ ತಲೆ ಬೋಳಿಸಿದ್ದಲ್ಲದೇ ಬೆತ್ತಲೆ ಮೆರವಣಿಗೆಯಿಂದ ಅವಮಾನಿತನಾದ ಪಂಕಜ್, ಸಾರ್ವಜನಿಕ ಶೌಚಾಲಯಕ್ಕೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ನಂತರ ಯಾರೋ ಒಬ್ಬರು ಟವೆಲ್ಲೊಂದನ್ನು ಕೊಟ್ಟ ನಂತರವಷ್ಟೇ ಶೌಚಾಲಯದಿಂದ ಹೊರಬಂದ ಆತ ಟವೆಲ್ ಸುತ್ತಿಕೊಂಡು ತನ್ನ ಮನೆಗೆ ಓಡಿದ್ದಾನೆ. ನಂತರ ಮನೆಗೆ ಬಂದ ಆತ ಮತ್ತೆ ಬಾಗಿಲು ತೆಗೆದಿಲ್ಲ. ಕೂಡಲೇ ಸ್ಥಳೀಯರು ಪೊಲೀಸರನ್ನು ಕರೆದಿದ್ದು, ಪೊಲೀಸರು ಬಾಗಿಲು ಮುರಿದು ಒಳನುಗ್ಗಿ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ.