ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ (Shivaraj Kumar) ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದರೆ, ಧನುಷ್ (Dhanush) ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತತವಾಗಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಧನುಷ್ ಮತ್ತು ಶಿವರಾಜ್ ಕುಮಾರ್ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ.
ನಿನ್ನೆ ಬೆಂಗಳೂರಿನ (Bangalore) ಚಿನ್ನಸ್ವಾಮಿ ಕ್ರೀಡಾಂಗಣಯದಲ್ಲಿ ಆಯೋಜನೆಯಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 24ನೇ ಪಂದ್ಯದಲ್ಲಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ (RCB,) ಹಾಗೂ ಚೆನ್ನೈನ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಿದ್ದವು. ರಾಯಲ್ ಚಾಲೆಂಜರ್ಸ್ ಪರವಾಗಿ ಶಿವರಾಜ್ ಕುಮಾರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಧನುಷ್ ಬೆಂಬಲಿಸಿದರು. ಜೊತೆಗೆ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8 ರನ್ ಗಳ ರೋಚಕ ಗೆಲುವನ್ನು ಕಂಡಿದೆ. ಶಿವರಾಜ್ ಕುಮಾರ್ ಹಾಗೂ ಧನುಷ್ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದ ಫೋಟೋಗಳು ವೈರಲ್ ಆಗಿವೆ.
ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪಾತ್ರ ಯಾವುದು, ಹಿನ್ನೆಲೆ ಏನು ಎನ್ನುವ ವಿಚಾರ ಈವರೆಗೂ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಸ್ವತಃ ಶಿವರಾಜ್ ಕುಮಾರ್ ಕೂಡ ಈತನಕ ಹೇಳಿಕೊಂಡಿಲ್ಲ. ಪಾತ್ರ ಮತ್ತು ಕಥೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ.
ಆದರೆ, ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದ ಕೆಲವು ವಿಷಯಗಳು ಸೋರಿಕೆಯಾಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ ರಾಜು ಎನ್ನುವವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾತ್ರ ಮತ್ತು ಸಿನಿಮಾದ ಕಥೆಯನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.
ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟದ ಕಥೆಯನ್ನು ಕ್ಯಾಪ್ಟನ್ ಮಿಲ್ಲರ್ ನಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರಂತೆ.