ಬೆಂಗಳೂರು: ಎಲೆಕ್ಷನ್ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನಗಳು ಸೃಷ್ಟಿಯಾಗ್ತಿವೆ. ಪಕ್ಷಾಂತರ ಪರ್ವ ಜೋರಾಗಿದೆ. ಅದರಲ್ಲೂ ಬಿಜೆಪಿಗೆ ಪಕ್ಷಾಂತರದ ಹೊಡೆತ ಜೋರಾಗೇ ತಟ್ಟಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬೆನ್ನಲ್ಲೇ, ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಬಿಜೆಪಿ ಸೇರಿದ್ದಾರೆ. ಇವರಿಬ್ಬರೂ ಲಿಂಗಾಯತ ನಾಯಕರು ಅನ್ನೋದು ಇಲ್ಲಿ ಗಮನಾರ್ಹ! ಹಾಗಾದ್ರೆ, ಈ ಹಂತದಲ್ಲಿ ಕಾಂಗ್ರೆಸ್ ಆಗುವ ಲಾಭವೇನು? ಬಿಜೆಪಿಗೆ ಆಗಬಹುದಾದ ನಷ್ಟ ಏನು?
ಪಕ್ಷಾಂತರ ಮಾಡಿದ ಶೆಟ್ಟರ್ ಗೆಲ್ತಾರಾ?
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಗೆಲುವು ದಾಖಲಿಸಿದ ಹೆಗ್ಗಳಿಕೆ ಜಗದೀಶ್ ಶೆಟ್ಟರ್ ಅವರಿಗೆ ಇದೆ. ಬಿಜೆಪಿಯಲ್ಲಿ ಸಚಿವರಾಗಿ, ಒಮ್ಮೆ ಸಿಎಂ ಕೂಡಾ ಆಗಿದ್ದ ಜಗದೀಶ್ ಶೆಟ್ಟರ್ಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ, ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ತಮ್ಮದೇ ಲಿಂಗಾಯತ ಸಮುದಾಯದ ಬಲ ಇದೆ. ಯಾಕಂದ್ರೆ ಈ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಒಟ್ಟು ಎರಡೂವರೆ ಲಕ್ಷ ಮತದಾರರ ಪೈಕಿ ಲಿಂಗಾಯತರೇ ಸುಮಾರು 75 ಸಾವಿರದಷ್ಟು ಇದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳೂ ಲಿಂಗಾಯತರಿಗೇ ಟಿಕೆಟ್ ನೀಡುತ್ತವೆ. ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲಿರುವ ಶೆಟ್ಟರ್ ಅವರಿಗೆ ಬಿಜೆಪಿಯ ಎದುರಾಳಿ ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಆದ್ರೆ, ಸತತ ಗೆಲುವಿನ ಸರದಾರ ಎಂದೇ ಹೆಸರಾಗಿರುವ ಜಗದೀಶ್ ಶೆಟ್ಟರ್, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಆದ್ರೆ, ಕಾರ್ಯಕರ್ತರಿಗೆ ಟಿಕೆಟ್ ನೀಡ್ತೇವೆ ಎಂದು ಹೇಳುತ್ತಿರುವ ಬಿಜೆಪಿ ಯಾವ ರೀತಿಯ ತಂತ್ರಗಾರಿಕೆ ನಡೆಸುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.
ಅಥಣಿಯಲ್ಲಿ ಸವದಿಯೋ? ಕುಮಟಳ್ಳಿಯೋ?
ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಮೊದಲು ಸಿಡಿದೆದ್ದವರು ಲಕ್ಷ್ಮಣ ಸವದಿ. ಮಾಜಿ ಡಿಸಿಎಂ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಲಕ್ಷ್ಮಣ ಸವದಿ, ಬಿಜೆಪಿ ಸದಸ್ಯತ್ವದ ಜೊತೆಯಲ್ಲೇ ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿ ಇದೀಗ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿದ್ದರು. ಆಗ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಸೋಲು ಕಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2019ರಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿದ ಮಹೇಶ್ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಈ ಬಾರಿ ಕೂಡಾ ಲಕ್ಷ್ಮಣ ಸವದಿ ಬದಲಿಗೆ ಮಹೇಶ್ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ಗೆ ಹಾರಿರುವ ಲಕ್ಷ್ಮಣ ಸವದಿ, ಈ ಬಾರಿ ಮಹೇಶ್ ಕುಮಟಳ್ಳಿ ವಿರುದ್ಧ ಗೆಲ್ಲುವ ಸವಾಲಿನ ಜೊತೆಯಲ್ಲೇ ಅಕ್ಕಪಕ್ಕದ ಹಲವು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸವಾಲು ಸ್ವೀಕರಿಸಿದ್ದಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಅಥಣಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಜಾನನ ಮಂಗಸೂಳಿ ಅವರ ಮನವೊಲಿಕೆಯನ್ನೂ ಮಾಡ್ತಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ನಿಜವಾದ ಸವಾಲು ಇರೋದು ರಮೇಶ್ ಜಾರಕಿಹೊಳಿ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪ್ರಚಾರ ಅಬ್ಬರದ ಪ್ರಚಾರ ಮಾಡ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ಈ ಬಾರಿ ಪಾಠ ಕಲಿಸುತ್ತೇನೆ ಅಂತಾ ಶಪಥ ಮಾಡಿದ್ದಾರೆ ಲಕ್ಷ್ಮಣ ಸವದಿ. ಎಲ್ಲಕ್ಕಿಂತಾ ಹೆಚ್ಚಾಗಿ ಬೆಳಗಾವಿ ಭಾಗದ ಪ್ರಬಲ ಲಿಂಗಾಯತ ನಾಯಕನಾಗಿ ಗುರ್ತಿಸಿಕೊಂಡಿರುವ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರೋದು ಈ ಭಾಗದಲ್ಲಿ ಬಿಜೆಪಿಯ ಲಿಂಗಾಯತ ಮತಬ್ಯಾಂಕ್ಗೆ ಹೊಡೆತ ಬೀಳುತ್ತಾ ಅನ್ನೋ ಪ್ರಶ್ನೆಯೂ ಎದುರಾಗಿದೆ.
ಆಗ ಲಿಂಗಾಯತ ಧರ್ಮ ವಿವಾದ! ಈಗ ಕಾಂಗ್ರೆಸ್ಗೆ ಲಿಂಗಾಯತ ನಾಯಕರ ಬಲ!
ಕಳೆದ ಚುನಾವಣೆ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ ಭಾರೀ ಸದ್ದು ಮಾಡಿತ್ತು. ಅಂದಿನ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಜಾತಿ ವಿಷ ಬೀಜ ಬಿತ್ತಿದ ಆರೋಪ ಕೇಳಿ ಬಂದಿತ್ತು. ವೀರಶೈವ – ವೀರಶೈವರ ನಡುವೆ ಒಡಕು ಮೂಡಿಸಿಲು ಯತ್ನ ಮಾಡಲಾಗ್ತಿದೆ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿತ್ತು. ಚುನಾವಣೆಯಲ್ಲಿ ಈ ವಿಚಾರ ಕಾಂಗ್ರೆಸ್ಗೆ ತಿರುಗುಬಾಣವಾಗಿತ್ತು. ಆದ್ರೆ, ಈ ಬಾರಿ ಕೆಲ ಲಿಂಗಾಯತ ನಾಯಕರೇ ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ಹಾಗೂ ಸವದಿ ಕಾಂಗ್ರೆಸ್ ಸೇರ್ಪಡೆ ಬೆಳಗಾವಿ ಹಾಗೂ ಹುಬ್ಬಳ್ಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡುತ್ತೆ ಅನ್ನೋ ಕುತೂಹಲ ಇದೀಗ ಶುರುವಾಗಿದೆ. ಇಬ್ಬರೂ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಸುತ್ತಮುತ್ತಲ ಹಲವು ಕ್ಷೇತ್ರಗಳಲ್ಲಿ ಅದರಲ್ಲೂ ಲಿಂಗಾಯತ ಸಮುದಾಯದ ಮೇಲೆ ಪ್ರಭಾವ ಬೀರೋದ್ರಲ್ಲಿ ಯಶಸ್ವಿ ಆಗ್ತಾರಾ ಅನ್ನೋದು ಸದ್ಯದ ಪ್ರಶ್ನೆ!
ಬಿಜೆಪಿಗೆ ಯಡಿಯೂರಪ್ಪ ಎಫೆಕ್ಟ್ ಏನು?
75 ವರ್ಷ ಪೂರ್ಣವಾಯ್ತು ಅನ್ನೋ ಕಾರಣಕ್ಕೆ 2021ರಲ್ಲಿ ಯಡಿಯೂರಪ್ಪ ಸಿಎಂ ಪಟ್ಟ ಕಳೆದುಕೊಂಡರು. ಈ ವೇಳೆ ಹಲವು ಲಿಂಗಾಯತ ಮಠಾಧೀಶರು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದರು. ಈ ಸಮಯದಲ್ಲಿ ಲಿಂಗಾಯತರೇ ಆದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ನೀಡಿದ್ದರೂ ಕೂಡಾ ಲಿಂಗಾಯತ ಸಮುದಾಯದ ಅಸಮಾಧಾನ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಅನ್ನೋ ಮಾತುಗಳೇ ಕೇಳಿ ಬಂದವು. ಜೊತೆಯಲ್ಲಿ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ. ಈ ಬಾರಿ ಶಿಕಾರಿಪುರದಿಂದ ಯಡಿಯೂರಪ್ಪ ಬದಲಿಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಿದ್ದಾರೆ. ಜೊತೆಯಲ್ಲೇ ಮುಸ್ಲಿಮರ ಮೀಸಲಾತಿಯ ಪಾಲು ಕೂಡಾ ಲಿಂಗಾಯತರಿಗೆ ನೀಡುವ ಮೂಲಕ ಸರ್ಕಾರ ಲಿಂಗಾಯತ ಸಮುದಾಯದ ಮನವೊಲಿಕೆಗೆ ಮುಂದಾಗಿದೆ. ಆದ್ರೆ ಈ ವಿಚಾರದಲ್ಲೂ ಬಿಜೆಪಿ ಸಂಪೂರ್ಣ ಯಶಸ್ಸು ಕಂಡಿಲ್ಲ. ಇನ್ನು ಈ ಬಾರಿ ಬಿಜೆಪಿಗೆ ಬಹುಮತ ಸಿಕ್ಕರೆ ಲಿಂಗಾಯತ ಸಮುದಾಯದವರೇ ಸಿಎಂ ಆಗಲಿದ್ದಾರೆ, ಅದರಲ್ಲೂ ಯುವ ನಾಯಕರಿಗೆ ಪಟ್ಟ ಕಟ್ಟಬಹುದು ಅನ್ನೋ ಮಾತುಗಳಿವೆ. ಲಿಂಗಾಯತ ಸಮುದಾಯದ ನಾಯಕ ಅರವಿಂದ್ ಬೆಲ್ಲದ್ ರೇಸ್ನಲ್ಲಿ ಇದ್ದಾರೆ ಅನ್ನೋ ವಿಚಾರವೂ ಚಾಲ್ತಿಯಲ್ಲಿದೆ.
ಸಮೀಕ್ಷೆಗಳು ಹೇಳೋದೇನು?
ಕರ್ನಾಟಕ ಎಲೆಕ್ಷನ್ ಸಂಬಂಧ ಈಗಾಗಲೇ ಮೂರು ಸಮೀಕ್ಷೆಗಳು ಹೊರಬಿದ್ದಿವೆ. ಈ ಪೈಕಿ ಸಿ ವೋಟರ್ ಸಂಸ್ಥೆ ಕಾಂಗ್ರೆಸ್ಗೆ ಸರಳ ಬಹುಮತ ಬರಲಿದೆ ಅನ್ನೋ ಲೆಕ್ಕಾಚಾರ ಕೊಟ್ಟಿದೆ. ಲೋಕ್ಪೋಲ್ ಸಮೀಕ್ಷೆ ಕೂಡಾ ಕಾಂಗ್ರೆಸ್ಗೆ ಸರಳ ಬಹುಮತ ಸಿಗಬಹುದು ಎಂದು ಅಂದಾಜಿಸಿದೆ. ಆದ್ರೆ, ಜನ್ ಕಿ ಬಾತ್ ಸಮೀಕ್ಷೆ ಮಾತ್ರ ಅತಂತ್ರ ವಿಧಾನಸಭೆ ನಿರ್ಮಾಣ ಆಗಬಹುದು ಎಂದು ಭವಿಷ್ಯ ನುಡಿದಿದೆ. ಆದರೂ ಬಿಜೆಪಿ 100 ಸ್ಥಾನಗಳನ್ನಾದ್ರೂ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಅಂದಾಜಿಸಿದೆ.
ಹಾಗೆ ನೋಡಿದ್ರೆ ಇವೆಲ್ಲವೂ ಚುನಾವಣಾ ಪೂರ್ವ ಸಮೀಕ್ಷೆಗಳು. ರಾಜ್ಯದಲ್ಲಿ ಮತದಾನಕ್ಕೆ 1 ತಿಂಗಳು ಬಾಕಿ ಇರುವಾಗ ಹೊರಬಿದ್ದ ಸಮೀಕ್ಷೆಗಳು. ಇದೀಗ ಪ್ರಮುಖ ಪಕ್ಷಗಳ ಟಿಕೆಟ್ ಹಂಚಿಕೆ ನಂತರ ಹಲವೆಡೆ ರಾಜಕೀಯ ಸಮೀಕರಣಗಳೇ ಬದಲಾಗಿವೆ. ಹಲವು ನಾಯಕರ ಪಕ್ಷಾಂತರವೂ ಆಗಿದೆ. ಈ ಹಂತದಲ್ಲಿ ರಾಜಕೀಯ ಲೆಕ್ಕಾಚಾರ ಏನಾಗಬಹುದು ಅನ್ನೋದನ್ನ ತಿಳಿಯೋದಕ್ಕೆ ಮತದಾನದ ಬಳಿಕ ಪ್ರಕಟವಾಗುವ ಎಕ್ಸಿಟ್ ಪೋಲ್ ಸಮೀಕ್ಷೆವರೆಗೂ ಕಾಯಬೇಕಾಗಬಹುದು.
ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ 38 ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಕೊಟ್ಟಿರಲಿಲ್ಲ. ಹೊಸ ಮುಖಗಳಿಗೆ ಟಿಕೆಟ್ ನೀಡಿ ಬಿಜೆಪಿ ದಿಗ್ವಿಜಯ ಸಾಧಿಸಿತ್ತು. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತವರಿನಲ್ಲಿ ಬಂಡಾಯದ ಬಿಸಿ ಅಷ್ಟಾಗಿ ತಟ್ಟಿರಲಿಲ್ಲ. ಆದ್ರೆ ರಾಜ್ಯದ ಪರಿಸ್ಥಿತಿ ಆ ರೀತಿ ಇಲ್ಲ. ಅದರಲ್ಲೂ ಲಿಂಗಾಯತ ಸಮುದಾಯದ ನಾಯಕರಾದ ಸವದಿ ಹಾಗೂ ಶೆಟ್ಟರ್ ಪಕ್ಷಾಂತರ ಸೇರಿದಂತೆ ಹಲವು ಬಿಜೆಪಿ ನಾಯಕರು ಬಂಡೆದ್ದಿದ್ದಾರೆ. ಈ ಬಂಡಾಯ ಬಿಜೆಪಿಗೆ ಬಿಸಿ ಮುಟ್ಟಿಸುತ್ತಾ? ಅಥವಾ ಹೊಸ ಮುಖಗಳಿಗೆ ಜನ ಮಣೆ ಹಾಕುವ ಮೂಲಕ ಆಡಳಿತ ವಿರೋಧಿ ಅಲೆಗೆ ಬಿಜೆಪಿ ಟಾನಿಕ್ ಕೊಡುತ್ತಾ ಅನ್ನೋದೇ ಸದ್ಯದ ಕುತೂಹಲ!