ಬೆಂಗಳೂರು: ಬಿಜೆಪಿ ಹಾಳಾಗಲು ಬಿ.ಎಲ್.ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಈ ಮೊದಲು ಬಿಜೆಪಿಯಲ್ಲಿ ತಮಗೆ ನೀಡಿದ್ದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. 10 ತಿಂಗಳು ಮುಖ್ಯಮಂತ್ರಿಯಾಗಿದ್ದೆ. ರೈತರ 25 ಸಾವಿರ ರೂ.ಸಾಲ ಮನ್ನಾ ಮಾಡಿದ್ದೆ, 25 ಸಾವಿರ ಮಂದಿ ದಿನಗೂಲಿ ನೌಕರರನ್ನು ಖಾಯಂ ಮಾಡಿದ್ದೇನೆ. ಅವಕಾಶ ಸಿಕ್ಕಾಗ ಈ ರೀತಿ ಹಲವಾರು ಜನಪರ ಕೆಲಸ ಮಾಡಿದ್ದೇನೆ. ನನ್ನ ಪ್ರಾಮಾಣಿಕತೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಶ್ಲಾಘಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನನಗೆ ಟಿಕೆಟ್ ಕೈ ತಪ್ಪಲು ಕಾರಣ.
ಈಗ ನನ್ನನ್ನು ಅವಕಾಶವಾದಿ ಎಂದು ಟೀಕೆ ಮಾಡಲಾಗುತ್ತಿದೆ. ಅಧಿಕಾರದ ಲಾಲಸೆ ಇದ್ದಿದ್ದರೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮಾರನೆಯ ದಿನವೇ ಸಚಿವನಾಗುವುದಿಲ್ಲ ಎಂದು ಘೋಷಣೆ ಮಾಡುತ್ತಿದ್ದೇನೆ? ಅಧಿಕಾರದ ಆಸೆ ಇದ್ದರೆ ನಾನು ಸಚಿವನಾಗಬಹುದಿತ್ತು, ಪ್ರಭಾವಿ ಖಾತೆ ನಿಭಾಯಿಸಬಹುದಿತ್ತು ಎಂದರು. ನನಗೆ ಟಿಕೆಟ್ ಕೈತಪ್ಪಲು ಎಲ್ಲರೂ ಪೂಜ್ಯಭಾವದಿಂದ ನೋಡುವ ಬಿ.ಎಲ್.ಸಂತೋಷ್ ಕಾರಣ. ಸಂತೋಷ್ರ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲಾಗಿದೆ. ಮಹೇಶ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ, ನನಗೂ ಪರಿಚಿತರು. ಅವರ ಬಗ್ಗೆ ಗೌರವ ಇದೆ. ನನಗೆ ಹೇಳುವಂತೆ ಅವರನ್ನು ವಿಧಾನಪರಿಷತ್, ರಾಜ್ಯಸಭೆ ಸದಸ್ಯರನ್ನಾಗಿ ಮಾಡಬಹುದಿತ್ತು. ಕಿರಿಯರಾದ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲು ನನ್ನಂತಹ ಹಿರಿಯನಿಗೆ ಅನ್ಯಾಯ ಮಾಡಬಹುದೇ ಎಂದು ಪ್ರಶ್ನಿಸಿದರು.