ಚಿತ್ರದುರ್ಗ: ಪಕ್ಷಾಂತರದ ಸಾಧಕ ಬಾಧಕ ಚುನಾವಣೆ ಬಳಿಕ ತಿಳಿಯಲಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗ (Chitradurga) ತಾಲೂಕಿನ ಕ್ಯಾದಿಗ್ಗೆರೆ ಬಳಿಯ ಹೆಲಿಪ್ಯಾಡ್ಗೆ ಆಗಮಿಸಿದ್ದ ಹೆಚ್ಡಿಕೆ ಮಾಜಿ ಎಂಎಲ್ಸಿ ರಘು ಆಚಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಪಕ್ಷಾಂತರ ಸಹಜವಾಗಿ ನಡೆಯುತ್ತದೆ. ಆದರೆ ಅದರ ಸಾಧಕ ಬಾಧಕ ಚುನಾವಣೆ ಬಳಿಕ ಅವರಿಗೆ ಅರ್ಥವಾಗಲಿದೆ ಎಂದು ಹೇಳಿದರು.
ಕೋಟೆ ನಾಡಿನ ಮಾಜಿ ಎಂಎಲ್ಸಿ ರಘು ಆಚಾರ್ ಜೆಡಿಎಸ್ (JDS) ಸೇರ್ಪಡೆಯಿಂದ ಈ ಭಾಗದಲ್ಲಿ ಬಲ ಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 3-4 ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲುವ ಭರವಸೆ ಇದೆ. ಏಪ್ರಿಲ್ 19ಕ್ಕೆ ರಘು ಆಚಾರ್ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ನಾನು ಅವರೊಂದಿಗೆ ಬರುತ್ತೇನೆ ಎಂದು ತಿಳಿಸಿದರು.
ಹೊಳಲ್ಕೆರೆಯಲ್ಲಿ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಇಂದ್ರಜಿತ್ ನಾಯ್ಕ್ ಕೂಡ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಹೊಳಲ್ಕೆರೆಯಿಂದ ಇಂದ್ರಜಿತ್ ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಮೊಳಕಾಲ್ಮೂರು ಅಭ್ಯರ್ಥಿ ಘೋಷಣೆ ಬಾಕಿಯಿದೆ. ಈ ಸಂಬಂಧ ನಮ್ಮ ಹಿರಿಯ ನಾಯಕ ಎತ್ತಿನಹಟ್ಟಿ ಗೌಡ್ರು ತಿಪ್ಪೇಸ್ವಾಮಿ ಜೊತೆ ಮಾತಾಡಿದ್ದೇವೆ. ಮಂಗಳವಾರ ಅಥವಾ ಬುಧವಾರ ಮೊಳಕಾಲ್ಮೂರು ಸೂಕ್ತ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.
ಅರ್ಧ ಗಂಟೆಗೂ ಹೆಚ್ಚು ಸಮಯ ರಘು ಆಚಾರ್ ಜೊತೆ ಮಾತುಕತೆ ನಡೆಸಿದ ಹೆಚ್ಡಿಕೆ ಹೆಲಿಕಾಪ್ಟರ್ಗೆ ಇಂಧನ ಭರ್ತಿಯಾದ ಬಳಿಕ ಸವದತ್ತಿಗೆ ಪ್ರಯಾಣ ಬೆಳೆಸಿದರು. ಈ ವೇಳೆ ರಘು ಆಚಾರ್ ಪತ್ನಿ ಆಶಾ ಆಚಾರ್ ಇದ್ದರು.