ಬಾಗಲಕೋಟೆ: ನನ್ನ ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ. ನನ್ನ ಈ ಸ್ಥಿತಿಗೆ ಅವರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವಾಗ್ದಾಳಿ ನಡೆಸಿದ್ದರು. ಶೆಟ್ಟರ್ನ ಈ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ನಾವು ಅವರ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ಹಾಗೂ ರೋಡ್ ಶೋದಲ್ಲಿ ಭಾಗವಹಿಸಲು ಮುಧೋಳ ನಗರಕ್ಕೆ ಆಗಮಿಸಿದ ಬೊಮ್ಮಾಯಿ ಮಾಧ್ಯಮಗಳ ಜೊತೆ ಮಾತನಾಡುತ್ತ, ಜಗದೀಶ್ ಶೆಟ್ಟರ್ ಹೇಳಿಕೆ ಸರಿಯಲ್ಲ. ನಾವು ರಾಜ್ಯಮಟ್ಟದಿಂದ ಅವರ ಹೆಸರನ್ನು ಕಳುಹಿಸಿದ್ದೆವು. ಮೇಲ್ಮಟ್ಟದಲ್ಲಿ ಒಂದು ನೀತಿಯ ಮೇಲೆ ಟಿಕೆಟ್ ಫೈನಲ್ ಮಾಡಿದ್ದಾರೆ. ಈಗಾಗಲೇ ಆ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಅವರ ಆರೋಪದ ಬಗ್ಗೆ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಸೀಟ್ ಗೆಲ್ಲಲು ರೂಪುರೇಷೆಗಳನ್ನು ಮಾಡಿದೆ. ಹೆಚ್ಚು ಸೀಟ್ ಗೆದ್ದೇಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಬಿಜೆಪಿ (BJP) ತೊರೆದಿದ್ದರಿಂದ ಲಿಂಗಾಯತ ಮತಗಳಿಗೆ ಪೆಟ್ಟು ಬೀಳುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಕರ್ನಾಟಕ ರಾಜಕಾರಣದ ಲಿಂಗಾಯತರು ಜಾಗೃತ ಮತದಾರರಿದ್ದಾರೆ. ಯಾವಾಗ ಯಾವ ನಿರ್ಣಯ ತೆಗೆದುಕೊಂಡಿದ್ದಾರೋ ಸರಿಯಾಗಿಯೇ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ (Congress) ಪಕ್ಷ ಚುನಾವಣೆ ಹತ್ತಿರ ಬಂದಾಗ ಲಿಂಗಾಯತರಿಗೆ ಬಹಳ ಪ್ರೀತಿ ತೋರಿಸುತ್ತಿದೆ ಎಂದು ಟಾಂಗ್ ನೀಡಿದರು.
ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಲಿಂಗಾಯತರನ್ನೇ ಒಡೆಯಲು ಹೊರಟಿತ್ತು. ಲಿಂಗಾಯತ ಛಿದ್ರ ಮಾಡೋಕೆ ಹೊರಟಿದ್ದ ಕಾಂಗ್ರೆಸ್ ಕ್ರಮ ಯಾರೂ ಮರೆಯಲ್ಲ ಎಂದು ಪರೋಕ್ಷವಾಗಿ ಎಂಬಿ ಪಾಟೀಲ್ಗೆ ಟಾಂಗ್ ನೀಡಿದರು. 2ಎ ಮೀಸಲಾತಿ ಕೊಡುವುದಕ್ಕೆ ವಿರೋಧ ಮಾಡಿದವರು, 2009ರಲ್ಲೇ ಸೇರಿಸಬೇಕೆಂದಾಗ ಆಗಲೂ ವಿರೋಧ ಮಾಡಿದರು. 2016ರಲ್ಲಿ ಅದನ್ನು ತಿರಸ್ಕರಿಸಿದರು. ಈಗ ನಾವು ಸೇರಿಸಿದ ಮೇಲೆ ಕುಮ್ಮಕ್ಕು ಕೊಟ್ಟು, ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಹಾಕಿಸಿದ್ದಾರೆ ಎಂದರು.
ಲಿಂಗಾಯತರ ಪ್ರತಿಯೊಂದು ಅಭಿವೃದ್ಧಿಗೆ ವಿರೋಧ ಕಾಂಗ್ರೆಸ್ಸಿಗರು ಮಾಡಿದ್ದಾರೆ. ಸಿದ್ದರಾಮಯ್ಯ ಜಿಲೇಬಿ ಫೈಲ್ ಅಂತಾ ಇತ್ತು. ಜಿಲೇಬಿ ಫೈಲ್ ಯಾರಾದರೂ ಮರೆಯೋದಕ್ಕೆ ಸಾಧ್ಯಾನಾ ಎಂದು ಲೇವಡಿ ಮಾಡಿದರು. ಈ ಭಾಗದಲ್ಲಿ ಹೆಚ್ಚಿರುವ ರೈತ ಸಮುದಾಯ, ಯುಕೆಪಿ ಮೇಲೆ ಅವಲಂಬಿತ ಆಗಿದೆ. ಯುಕೆಪಿಗೆ ಯಾರಾದರೂ ಹಿನ್ನೆಡೆ ಮಾಡಿದರೆ ಅದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಮೊದಲಿನಿಂದಲೂ ಹಿನ್ನಡೆ ಮಾಡಿದೆ. ಮೊದಲನೇ, ಎರಡನೇ ಹಂತದಲ್ಲೂ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕೆಲವೇ ಕೆಲವು ಜನರ ಕಪಿಮುಷ್ಟಿಯಲ್ಲಿದೆ ಎಂಬ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ನಮ್ಮದು ರಾಷ್ಟ್ರೀಯ ಪಕ್ಷ. ಸರ್ವೋಚ್ಚ ನಾಯಕ ನರೇಂದ್ರ ಮೋದಿಯವರಲ್ಲಿ ಅತ್ಯಂತ ಪ್ರಜಾಪ್ರಭುತ್ವವಾಗಿದೆ ಎಂದು ತಿರುಗೇಟು ನೀಡಿದರು.