ಮೈಸೂರು: ನನ್ನ ಬಗ್ಗೆ ವರುಣಾ (Varuna) ಜನರಿಗೆ ಅಪಾರವಾದ ಪ್ರೀತಿಯಿದೆ. ನನ್ನ ಮತ್ತು ವರುಣಾ ಸಂಬಂಧವನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನು ಬದಲಾಯಿಸಲಿ ಏನೇ ಆದರೂ ನನ್ನ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯಾದ ಸೋಮಣ್ಣನವರಿಗೂ (V.Somanna) ವರುಣಾ ಕ್ಷೇತ್ರಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ಅವರನ್ನು ಬಲತ್ಕಾರವಾಗಿ ಈ ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವರು ನಮ್ಮ ಜಿಲ್ಲೆಯವರೂ ಅಲ್ಲ. ಅವರು ರಾಮನಗರ (Ramanagara) ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ (Bengaluru) ರಾಜಕಾರಣ ಮಾಡಿದ್ದಾರೆ. ವರುಣಾ ಕ್ಷೇತ್ರಕ್ಕೆ ಒಬ್ಬ ದುಡ್ಡಿರುವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎನ್ನುವ ಸಲುವಾಗಿ ಸೋಮಣ್ಣನವರನ್ನು ಇಲ್ಲಿ ನಿಲ್ಲಿಸಿದ್ದಾರೆ ಎಂದು ಟೀಕೆ ಮಾಡಿದರು.
ವರುಣಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಎಂಬ ಸಿಎಂ ಭರವಸೆಯ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ 4 ವರ್ಷಗಳ ಆಡಳಿತದಲ್ಲಿ ಯಾಕೆ ಮಾಡಲಿಲ್ಲ? ವರುಣಾ ತಾಲೂಕು ಕೇಂದ್ರ ಎಂಬುದು ಗೊತ್ತಾಗಲಿಲ್ಲ ಎಂದರೆ ಅವರು ರಾಜೀನಾಮೆ ನೀಡಲಿ. ರಾಜ್ಯ ಗೊತ್ತಿಲ್ಲ ಎಂದಮೇಲೆ ಮುಖ್ಯಮಂತ್ರಿ ಯಾಕಾಗಿದ್ದಾರೆ? ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಈಗ ಚುನಾವಣೆ ಬಂದಮೇಲೆ ಗೊತ್ತಾಗಿದೆ ಎಂದರೆ ಅದು ಎಂತಹಾ ಮರೆವಿರಬಹುದು ಎಂದು ಲೇವಡಿ ಮಾಡಿದರು.
ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ನಲ್ಲಿಯೇ ವರುಣಾ ಕ್ಷೇತ್ರವನ್ನು ತಾಲೂಕನ್ನಾಗಿ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೂರಕ್ಕೆ ಇನ್ನೂರು ಪರ್ಸೆಂಟ್ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಅವರಿಗೆ ಕೇವಲ 60 ಸೀಟ್ ಒಳಗಡೆ ಅಷ್ಟೇ ಬರುವುದು. ಈ ನಾಲ್ಕು ವರ್ಷದಲ್ಲಿ ಮೈಸೂರಿಗೆ ಹಾಗೂ ವರುಣಾ ಕೇತ್ರಕ್ಕೆ ಏನು ಮಾಡಿದ್ದಾರೆ ಇವರು? ಇದೇ ಸೋಮಣ್ಣ ಉಸ್ತುವಾರಿ ಸಚಿವರಾಗಿದ್ದಾಗ ವರುಣಾ ಕೇತ್ರದ ಜನರಿಗೆ ಒಂದು ಮನೆ ಕೊಟ್ಟಿದ್ದಾರಾ? ಸೂರಿಲ್ಲದವರಿಗೆ ಸೂರು ನೀಡಿದ್ದಾರಾ? ಮನೆ ಕೇಳಲು ಹೋದವರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಜನಗಳೇ ಹೇಳುತ್ತಿದ್ದಾರೆ. ಈಗ ಚುನಾವಣೆ ಸಮಯದಲ್ಲಿ ಬಂದು ಅದು ಮಾಡುತ್ತೇವೆ ಇದು ಮಾಡುತ್ತೇವೆ ಎಂದರೆ ಇಲ್ಲಿಯವರೆಗೆ ಅಭಿವೃದ್ಧಿ ಕೆಲಸ ಮಾಡಿದವರು ಯಾರು ಎಂದು ಪ್ರಶ್ನೆಗಳ ಸುರಿಮಳೆಗೈದರು.
ಬೊಮ್ಮಾಯಿ (Basavaraj Bommai) ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಂಬರ್ ಒನ್ ಸುಳ್ಳುಗಾರ. ರಾಮದಾಸ್ ಅವರಿಗೆ ಟಿಕೆಟ್ ಕೊಡಲಿಲ್ಲ. ಜಗದೀಶ್ ಶೆಟ್ಟರ್ (Jagadish Shettar) ಅವರಿಗೂ ಟಿಕೆಟ್ ದಕ್ಕಲಿಲ್ಲ. ಈಶ್ವರಪ್ಪನವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಅವರಿಗೆ ಬಾಯಿ ಸರಿ ಇರಲಿಲ್ಲ. ಲಕ್ಷ್ಮಣ ಸವದಿ (Laxman Savadi) ಕೂಡಾ ಹಿರಿಯ ನಾಯಕರು. ಅವರಿಗೂ ಯಾಕೆ ಟಿಕೆಟ್ ತಪ್ಪಿಸಿದರು? ಬಿಜೆಪಿ ಈಗ ಬಿಎಲ್ ಸಂತೋಷ್ (B.L.Santhosh) ಎಂಬ ವ್ಯಕ್ತಿಯ ಕಪಿಮುಷ್ಠಿಯಲ್ಲಿದೆ. ಬಿಜೆಪಿಯ ಈ ಎಲ್ಲಾ ಬೆಳವಣಿಗೆಗಳಿಗೆ ಸಂತೋಷ್ ಕಾರಣ. ಸೋಮಣ್ಣನವರನ್ನು ಹರಕೆ ಕುರಿ ಮಾಡಲು ಇಲ್ಲಿ ನಿಲ್ಲಿಸಿದ್ದಾರೆ ಎಂದು ಹರಿಹಾಯ್ದರು.
ನಮ್ಮ ಪಕ್ಷಕ್ಕೆ ನಮ್ಮ ಸಿದ್ಧಾಂತವನ್ನು ಒಪ್ಪಿಕೊಂಡು ಯಾರೇ ಬಂದರು ಕೂಡಾ ಸೇರಿಸಿಕೊಳ್ಳುತ್ತೇವೆ. ಇವತ್ತು ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿ ನಾಳೆ ನಾಮಪತ್ರವನ್ನು (Nomination Papers) ಸಲ್ಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.