ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕೆ ಮಾನ್ಯತೆ ಇಲ್ಲ. ಇಲ್ಲಿ ಈವರೆಗೆ ಗೆದ್ದಿರುವುದು ನೀತಿ ರಾಜಕಾರಣವೇ ಎಂದು ಬಿಜೆಪಿ (BJP) ಅಭ್ಯರ್ಥಿ ಶಾಸಕ ಸಿ.ಟಿ.ರವಿ (C.T.Ravi) ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ (Press Club) ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ (Election) ಕೆಲವರು ಜಾತಿ ಹೆಸರಲ್ಲಿ ನನ್ನ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡುತ್ತಿದ್ದಾರೆ. ಅದು ಫಲಿಸುವುದಿಲ್ಲ. ಇಲ್ಲಿ ಈವರೆಗೆ ಅಭಿವೃದ್ಧಿ ಪರ ಹಾಗೂ ಸಿದ್ಧಾಂತಕ್ಕೆ ಬದ್ಧವಾದ ರಾಜಕಾರಣ ಮಾಡಿದ್ದೇನೆ. ಜಾತಿ ಮತ್ತು ಪಕ್ಷ ಕೇಳದೆ ನನ್ನ ಕೈಯಲ್ಲಾದ ಒಳ್ಳೆಯ ಕೆಲಸ ಮಾಡಿದ್ದೇನೆ. ಈಗಿನ ವಾತಾವರಣದಲ್ಲಿ ಜಿಲ್ಲೆಯಲ್ಲಿ ಐದಕ್ಕೆ ಐದೂ ಕ್ಷೇತ್ರದಲ್ಲೂ ಬಿಜೆಪಿ ಉತ್ತಮ ಅಂತರದಿಂದಲೇ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಸಣ್ಣ ಜಾತಿ ಮತ್ತು ಜನಾಂಗಗಳಿಗೂ ರಾಜಕೀಯ ಹಾಗೂ ಸಾಮಾಜಿಕವಾಗಿ ಆದ್ಯತೆ ಕೊಡುವ ಕೆಲಸ ನಮ್ಮ ಕ್ಷೇತ್ರದಲ್ಲಿ ಮಾಡಿದ್ದೇವೆ. ನಿಗಮ ಮಂಡಳಿಗಳಿಗೆ ನೇಮಕಾತಿ ಸಂದರ್ಭದಲ್ಲಿ ಇದೇ ಮಾದರಿಯನ್ನು ಅನುಸರಿಸುವಂತೆ ನಾವು ರಾಜ್ಯ ನಾಯಕರಿಗೆ ತಿಳಿಸಿದ್ದೇವೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನವನ್ನು ಪರಿಶಿಷ್ಟರಿಗೆ ಒದಗಿಸಿಕೊಡುವ ಕೆಲಸವನ್ನು ನಗರಸಭೆ ಹಾಗೂ ಎಪಿಎಂಸಿಗಳಲ್ಲಿ ಮಾಡಿ ತೋರಿಸಿದ್ದೇವೆ ಎಂದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ-ಸಾಧನೆಗೆ ಸಂಬಂಧಿಸಿದ ರಿಪೋರ್ಟ್ ಕಾರ್ಡನ್ನು ಕ್ಷೇತ್ರದ 55 ಸಾವಿರ ಮನೆಗಳಿಗೆ ತಲುಪಿಸಿದ್ದೇನೆ. ಯಾವುದೇ ಲೋಪ, ಅಭಿವೃದ್ಧಿ ಮತ್ತು ವೈಯಕ್ತಿಕ ನಡವಳಿಕೆ ಕಾರಣಕ್ಕೆ ಸಿ.ಟಿ.ರವಿಗೆ ಮತ ಹಾಕುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲದ ರೀತಿ ನಡೆದುಕೊಂಡಿದ್ದೇನೆ ಎಂದು ಹೇಳಿದರು.
ಈ ಬಾರಿ ಚುನಾವಣೆಯಲ್ಲಿ 1 ಲಕ್ಷ ಮತಗಳನ್ನು ಗಳಿಸುವ ಗುರಿ ಇದೆ. ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದ್ದೇವೆ. ನಮ್ಮ ಗುರಿ ಸಾಧಿಸಲಿದ್ದೇವೆ ಎನ್ನುವ ವಿಶ್ವಾಸವಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಅಂತಿಮವಾದ ನಂತರ ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವುದನ್ನು ಹೇಳುತ್ತೇವೆ ಎಂದರು.
ನಾಮಪತ್ರ (Nomination Papers) ಸಲ್ಲಿಕೆ ವೇಳೆ ಕಾರ್ಯಕರ್ತರು ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿ ಎಂದು ಕೂಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಕಾರ್ಯಕರ್ತರ ಅಪೇಕ್ಷೆ. ನಾನು ಪಕ್ಷದ ಕಟ್ಟಾಳು. ಪಕ್ಷ ಏನು ಹೇಳುತ್ತದೆ ಅದನ್ನು ಕೇಳುವವನು ಎಂದರು.
ಹೆಚ್.ಡಿ.ತಮ್ಮಯ್ಯ (H.D.Thammaiah) ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಂದರೆ 2008ರಲ್ಲಿ ತಮ್ಮಯ್ಯ ಬಿಜೆಪಿಗೆ ಬಂದವರು. ಪಕ್ಷ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಿತ್ತು. ಈಗ ಹೆಚ್ಚಿನ ಆಸೆ ಇಟ್ಟುಕೊಂಡು ಕಾಂಗ್ರೆಸ್ಗೆ (Congress) ಹೋಗಿದ್ದಾರೆ. ಅದು ರಾಜಕೀಯ ಸೈದ್ಧಾಂತಿಕ ಬದ್ಧತೆ ಇರುವ ರಾಜಕಾರಣವಲ್ಲ ಎಂದು ಹೇಳಿದರು