ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. 16ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಎದುರು ಲಾಸ್ಟ್ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸುವ ಮೂಲಕ ಕೆಕೆಆರ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಎಡಗೈ ಬ್ಯಾಟರ್ ತಮ್ಮ ಹೆಸರನ್ನು ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ಒತ್ತಿಬಿಟ್ಟಿದ್ದಾರೆ.
ಕಡು ಬಡತನದಿಂದ ಬೆಳೆದು ಬಂದು ಕ್ರಿಕೆಟ್ನಲ್ಲಿ ಕಠಿಣ ಪರಿಶ್ರಮ ವಹಿಸಿ ಇಂದು ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿರುವ ರಿಂಕು ಸಿಂಗ್, ತಮ್ಮಂತೆ ಕ್ರಿಕೆಟ್ನಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಎದುರ ನೋಡುತ್ತಿರುವ ಬಡ ಹಾಗೂ ಪ್ರತಿಭಾವಂತ ಆಟಗಾರರಿಗೆ ನೆರವಾಗಲು ವಿಶೇಷ ಹಾಸ್ಟೆಲ್ ಒಂದನ್ನು ಕಟ್ಟಿಸುತ್ತಿದ್ದಾರೆ ಎಂದು ಇದೀಗ ವರದಿಯಾಗಿದೆ.
ಟೈಟನ್ಸ್ ಎದುರು ಕೊನೇ ಓವರ್ನಲ್ಲಿ ಕೆಕೆಆರ್ ಗೆಲುವಿಗೆ 29 ರನ್ಗಳ ಅಗತ್ಯವಿದ್ದಾಗ ಯಾರೊಬ್ಬರು ಕೂಡ ಕೋಲ್ಕತಾ ತಂಡ ಗೆಲ್ಲುತ್ತದೆ ಎಂದು ಅಂದಾಜಿಸಿರಲಿಲ್ಲ. ಆದರೆ, ಅಸಾಧ್ಯವನ್ನು ಸಾಧ್ಯವನ್ನಾಗಿಸಿದ ರಿಂಕು ಸಿಂಗ್ ಎಡಗೈ ವೇಗದ ಬೌಲರ್ ಯಶ್ ದಯಾಳ್ ಎದುರು ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ ಕೊರಳಿಗೆ ಜಯದ ಮಾಲೆ ತೊಡಿಸಿದರು. ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್ ವೇಳೆ ಅಂತಿಮ ಓವರ್ನಲ್ಲಿ ಸತತ 5 ಸಿಕ್ಸರ್ಗಳು ಮೂಡಿಬಂದಿರುವುದು ಇದೇ ಮೊದಲ ಬಾರಿ ಆಗಿದೆ. ಈ ಮನಮೋಹಕ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ರಿಂಕು ರಾತ್ರೋರಾತ್ರಿ ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅವರ ಈ ಪರಾಕ್ರಮಕ್ಕೆ ಇಡೀ ಕ್ರಿಕೆಟ್ ಜಗತ್ತು ಸಲಾಮ್ ಹೊಡೆದಿದೆ ಕೂಡ.
ತಮ್ಮ ಅಸಾಧಾರಣ ಕ್ರಿಕೆಟ್ ಆಟದ ಮೂಲಕ ಎಲ್ಲರಿಂದ ಮೆಚ್ಚುಗೆ ಗಿಟ್ಟಿಸಿರುವ ರಿಂಕು ಸಿಂಗ್, ಇಂದು ತಮ್ಮಂತೆಯೇ ಕ್ರಿಕೆಟ್ ಜಗತ್ತಿನಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಎದುರು ನೋಡುತ್ತಿರುವ ಯುವ ಆಟಗಾರರ ನೆರವಿಗೆ ಮುಂದಾಗುವ ಮೂಲಕ ಕ್ರಿಕೆಟ್ ಪ್ರಿಯರ ಮನದಲ್ಲಿ ಮತ್ತಷ್ಟು ಗೌರವ ಸಂಪಾದಿಸಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆ ರಿಂಕು ಸಿಂಗ್
ರಿಂಕು ಸಿಂಗ್ ಸಾಧನೆಯ ಹಾದಿ ಅತ್ಯಂತ ಸ್ಪೂರ್ತಿದಾಯಕ. ಅವರ ತಂದೆ ಕಂಚಂದ್ರ ಉತ್ತರ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಡಿಲಿವರಿ ಕೆಲಸ ಮಾಡುತ್ತಾರೆ. ಹೀಗಾಗಿ ಕ್ರಿಕೆಟ್ ಬದುಕಿನ ಆರಂಭಿಕ ದಿನಗಳಲ್ಲಿ ರಿಂಕು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಇದೇ ಕಾರಣಕ್ಕೆ ತಮ್ಮಂತೆ ಈಗಲೂ ಕಷ್ಟ ಪಡುತ್ತಿರುವ ಯುವ ಹಾಗೂ ಬಡ ಕ್ರಿಕೆಟಿಗರಿಗೆ ನೆರವಾಗಲು ವಿಶೇಷ ಹಾಸ್ಟೆಲ್ ಕಟ್ಟಿಸಲು ಮುಂದಾಗಿದ್ದಾರೆ.
ರಿಂಕು ಸಿಂಗ್ ಅವರ ಬಾಲ್ಯದ ಕೋಚ್ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿರುವ ಸಂದರ್ಶನದಲ್ಲಿ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಅಲಿಗಢದಲ್ಲಿ ಬಡ ಕ್ರಿಕೆಟಿಗರ ಸಲುವಾಗಿ ಹಾಸ್ಟೆಲ್ ಕಟ್ಟಿಸಲು ರಿಂಕು ಮುಂದಾಗಿರುವ ಸಂಗತಿಯನ್ನು ಬಾಲ್ಯದ ಕೋಚ್ ತಿಳಿಸಿದ್ದಾರೆ. ಪ್ರತಿಭೆಯಿದ್ದು ಬಡತನದ ಕಾರಣ ಕಷ್ಟ ಪಡುತ್ತಿದ್ದರೆ ಅಂವರಿಗೆ ನೆರವಾಗಲು ರಿಂಕು ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಲುವಾಗಿ 50 ಲಕ್ಷ ರೂ. ಹೂಡಿಕೆಮ ಕೂಡ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
14 ಕೊಠಡಿಗಳಿರುವ ಹಾಸ್ಟೆಲ್
“ಯುವ ಮತ್ತು ಬಡ ಆಟಗಾರರಿಗೆ ಹಾಸ್ಟೆಲ್ ಕಟ್ಟಿಸಬೇಕು ಎಂದು ಅವರು ಹಿಂದೆಯೇ ಆಲೋಚಿಸಿದ್ದರು. ಕ್ರಿಕೆಟ್ನಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿರುವ ಯುವ ಆಟಗಾರರು ಹಣಕಾಸಿನ ಕೊರತೆ ಕಾರಣ ಅದನ್ನು ಕೈಬಿಡುತ್ತಿದ್ದಾರೆ. ಅಂತವರಿಗೆ ನೆರವಾಗಲು ರಿಂಕು ಮುಂದಾಗಿದ್ದಾರೆ. ರಿಂಕು ಈಗ ಹಣಕಾಸು ವಿಚಾರದಲ್ಲಿ ಸುಧಾರಿಸಿದ್ದಾರೆ. ಹೀಗಾಗಿ ಹಾಸ್ಟೆಲ್ ಕಟ್ಟಿಸುವ ಕನಸಿನ ಕಡೆಗೆ ಹೆಜ್ಜೆಯಿಟ್ಟಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಹಾಸ್ಟೆಲ್ ಉದ್ಘಾಟನೆಯಾಗಲಿದೆ. ಈ ಹಾಸ್ಟೆಲ್ನಲ್ಲಿ 14 ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ 4 ಮಂದಿ ಉಳಿಯಬಹುದಾಗಿದೆ. ಸಮಯದ ಅಭಾವದ ನಡುವೆಯೂ ಖುದ್ದಾಗಿ ಹಾಸ್ಟೆಲ್ ಮೇಲ್ವಿಚಾರಣೆಯನ್ನು ರಿಂಕು ಅವರೇ ನೋಡಿಕೊಳ್ಳಲಿದ್ದಾರೆ,” ಎಂದು ಕೋಚ್ ಮಾಹಿತಿ ನೀಡಿದ್ದಾರೆ.
ಹಾಸ್ಟೆಲ್ನಲ್ಲಿ ಪ್ರತ್ಯೇಕ ಬಾತ್ರೂಮ್ಗಳು, ಸುಸಜ್ಜಿತ ಅಡುಗೆ ಮನೆ ಕೂಡ ಇದ್ದು, ಆಟಗಾರರಿಗೆ ಬೇಕಾದ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಈ ಮೂಲಕ ಮಾಡಲಾಗಿದೆ. ಬಡವರಿಗೆ ನೆರವಾಗುವುದು ರಿಂಕು ಅವರ ಉದ್ದೇಶ. ಆವರು ಪಟ್ಟ ಕಷ್ಟವನ್ನು ಬೇರೆ ಮಕ್ಕಳು ಪಡಬಾರದೆಂದು ಈ ಮಹತ್ವಾಕಾಂಕ್ಷೀಯ ಯೋಜನೆ ಹಾಕಿಕೊಂಡಿದ್ದಾರೆ.