ಪ್ರಸ್ತುತ ನಡೆಯುತ್ತಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆಂದು ಕಳೆದ ಒಂದು ವರ್ಷದಿಂದ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಎಂಎಸ್ ಧೋನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಎಂಎಸ್ ಧೋನಿಗೆ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಸಿಎಸ್ಕೆ ನಾಯಕ ಬುದ್ದಿವಂತಿಕೆಯ ಉತ್ತರವನ್ನು ನೀಡಿದರು. ಇದರ ಬಗ್ಗೆ ಮಾತನಾಡಲು ಇನ್ನೂ ಸಾಕಷ್ಟು ಸಮಯವಿದೆ. ಹಾಗಾಗಿ ಈ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
“ತಮ್ಮ ಐಪಿಎಲ್ ವೃತ್ತಿ ಜೀವನ ವಿದಾಯದ ಬಗ್ಗೆ ಮಾತನಾಡಲು ಇನ್ನೂ ಸಾಕಷ್ಟು ಸಮಯವಿದೆ. ಸದ್ಯ ನಮಗೆ ಸಾಕಷ್ಟು ಪಂದ್ಯಗಳಿವೆ ಹಾಗೂ ನಿವೃತ್ತಿ ಬಗ್ಗೆ ನಾನು ಏನಾದರೂ ಮಾತನಾಡಿದರೆ, ಕೋಚ್ಗಳು ಒತ್ತಡಕ್ಕೆ ಒಳಗಾಗಲಿದ್ದಾರೆ,’ ಎಂದು ಎಂಎಸ್ ಧೋನಿ ಬುದ್ದಿವಂತಿಕೆಯ ಉತ್ತರವನ್ನು ನೀಡಿದ್ದಾರೆ.
2022ರ ಐಪಿಎಲ್ ಟೂರ್ನಿಗೂ ಮುನ್ನ ಎಂಎಸ್ ಧೋನಿ ಸಿಎಸ್ಕೆ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದರು. ಆದರೆ, ಜಡೇಜಾ ನಾಯಕತ್ವದಲ್ಲಿ ತಂಡ ಅತ್ಯಂತ ಹೀನಾಯ ಪ್ರದರ್ಶನ ತೋರಿತ್ತು. ನಾಯಕತ್ವದ ಒತ್ತಡವು ರವೀಂದ್ರ ಜಡೇಜಾ ಅವರ ವೈಯಕ್ತಿಕ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಿತ್ತು.
ಇದನ್ನು ಅರಿತ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಅವಧಿಯಲ್ಲಿ ಪುನಃ ಎಂಎಸ್ ಧೋನಿಗೆ ನಾಯಕತ್ವ ನೀಡಿತ್ತು. ಇದರ ಹೊರತಾಗಿಯೂ ಸಿಎಸ್ಕೆ ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಮ್ ಬ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದೊಂದಿಗೆ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು.
“ಎದುರಾಳಿ ಬೌಲರ್ಗಳು ಏನು ಮಾಡುತ್ತಿದ್ದಾರೆಂದು ನೀವು ಬಹಳಾ ಎಚ್ಚರಿಯಿಂದ ವೀಕ್ಷಿಸಬೇಕು. ಅವರು ಒಂದೇ ಒಂದು ನೋ ಬಾಲ್ ಹಾಗೂ ಹೆಚ್ಚುವರಿ ವೈಡ್ಗಳನ್ನು ಹಾಕಿರಲಿಲ್ಲ. ಅದರಲ್ಲೂ ವಿಶೇಷವಾಗಿ ಅವರು ನೂತನ ನಾಯಕನ ಅಡಿಯಲ್ಲಿ ಆಡುತ್ತಿದ್ದಾರೆ. ನಮ್ಮ ಬೌಲರ್ಗಳಿಗೆ ಇದು ಎರಡನೇ ಎಚ್ಚರಿಕೆ,” ಎಂದು ಎಂಎಸ್ ಧೋನಿ ನಗುತ್ತಾ ಹೇಳಿದರು.
2020ರ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಎಂಎಸ್ ಧೋನಿ, ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯುತ್ತಿದ್ದಾರೆ. ಇದೀಗ ಅವರಿಗೆ 41 ವರ್ಷ ವಯಸ್ಸಾಗಿದ್ದರು, ಅದ್ಭುತ ಫಿಟ್ನೆಸ್ ಅನ್ನು ಕಾಪಾಡಿಕೊಂಡು ಬಂದಿದ್ದಾರೆ. ಅಂದಹಾಗೆ ಈ ಟೂರ್ನಿಯ ಅಂತ್ಯಕ್ಕೆ ಎಂಎಸ್ ಧೋನಿ ಐಪಿಎಲ್ ವೃತ್ತಿ ಜೀವನದ ಬಗ್ಗೆ ಮಾಹಿತಿ ತಿಳಿಯಲಿದೆ.