ಬೆಂಗಳೂರು: ಸೋಮವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ನಡುವಿನ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದಲ್ಲಿ ತುಂಬಾ ನೆರೆದಿದ್ದ ಇತ್ತಂಡದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮಳೆಗರೆಯುತ್ತಾ ಆಟಗಾರರನ್ನ ಹುರಿದುಂಬಿಸಿದರು.
ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಸಿಡಿಯುತ್ತಿದ್ದ ಒಂದೊಂದು ಸಿಕ್ಸರ್, ಬೌಂಡರಿಗೂ ಎದೆಬಡಿತ ಹೆಚ್ಚಿಸುತ್ತಿತ್ತು. ಈ ವೇಳೆ ಸಿಎಸ್ಕೆ ಅಭಿಮಾನಿಯೊಬ್ಬ ʻಗೋವಾದಿಂದ ತಲಾ ಧೋನಿಯನ್ನ ನೋಡಲು ನಾನು ನನ್ನ ಬೈಕ್ ಮಾರಿದ್ದೇನೆʼ ಎನ್ನುವ ಪೋಸ್ಟರ್ ಹಿಡಿದುಕೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಂದ್ಯದ ನಡುವೆ ಗೋವಾ ಮೂಲದ ಯುವಕ ಪೋಸ್ಟರ್ ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ್ದಾನೆ. ಈತ ಗೋವಾ ಮೂಲದವನಾಗಿದ್ದು, ಐಪಿಎಲ್ (IPL 2023) ಅಂಗಳದಲ್ಲಿ ಧೋನಿ ಅಬ್ಬರಿಸೋದನ್ನ ನೋಡಲೇಬೇಕೆಂದು ತನ್ನ ಸ್ವಂತ ಬೈಕ್ ಮಾರಿ ಟಿಕೆಟ್ ಸಹ ಖರೀದಿಸಿದ್ದ ಎನ್ನಲಾಗಿದೆ. ಇದಕ್ಕೆ ಸಿಎಸ್ಕೆ ಅಭಿಮಾನಿಗಳು ನೀನು ಪಕ್ಕಾ ಫ್ಯಾನ್ ಬಿಡು ಗುರು ಅಂತಾ ಪ್ರಶಂಸೆ ವ್ಯಕ್ತಪಡಿಸಿದರೆ, ಆರ್ಸಿಬಿ ಅಭಿಮಾನಿಗಳು ಅದಕ್ಕೆ ವಿರೋಧವಾಗಿ ಕಾಮೆಂಟ್ ಮಾಡಿದ್ದಾರೆ.
ಚೆನ್ನೈ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಆರ್ಸಿಬಿ ತಂಡ ಆರಂಭದಲ್ಲೇ ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಲೊಮ್ರೋರ್ ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತ್ತು. ನಂತರ 3ನೇ ವಿಕೆಟ್ಗೆ ಜೊತೆಯಾದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್ವೆಲ್ 61 ಎಸೆತಗಳಲ್ಲಿ ಬರೋಬ್ಬರಿ 126 ರನ್ ಚಚ್ಚಿದರು. ಚೆನ್ನೈ ಬೌಲರ್ಗಳನ್ನು ಚೆಂಡಾಡಿದ ಇಬ್ಬರು 3ನೇ ವಿಕೆಟಿಗೆ 61 ಎಸೆತಗಳಲ್ಲಿ 126 ರನ್ ಜೊತೆಯಾಟವಾಡಿದರು. ಮ್ಯಾಕ್ಸ್ವೆಲ್ 76 ರನ್ (36 ಎಸೆತ, 3 ಬೌಂಡರಿ, 8 ಸಿಕ್ಸರ್) ಡುಪ್ಲೆಸಿಸ್ 62 ರನ್(33 ಎಸೆತ, 5 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು. ಇವರಿಬ್ಬರ ಆಟದಿಂದ ಆರ್ಸಿಬಿ 15 ಓವರ್ಗಳಲ್ಲೇ 169 ರನ್ ಕಲೆಹಾಕಿತ್ತು. 18ನೇ ಓವರ್ಗೆ 196 ರನ್ ಗಳಿಸಿತ್ತು. ಕೊನೆಯ 12 ಎಸೆತಗಳಿಗೆ 30 ರನ್ಗಳ ಅವಶ್ಯಕತೆಯಿತ್ತು. ಇದರಿಂದ ಆರ್ಸಿಬಿಗೆ ಗೆಲುವು ಖಚಿತ ಎಂದು ಭಾವಿಸಲಾಗಿತ್ತು.
ಕೊನೆಯಲ್ಲಿ ಮಹಿ ಮ್ಯಾಜಿಕ್ನಿಂದ ದಿನೇಶ್ ಕಾರ್ತಿಕ್ ಒಂದು ಕ್ಯಾಚ್ನಿಂದ ತಪ್ಪಿಸಿಕೊಂಡರೂ ಮತ್ತೊಂದು ಎಸೆತದಲ್ಲೇ ಸಿಕ್ಸರ್ ಸಿಡಿಸಲು ಮುಂದಾಗಿ ಕ್ಯಾಚ್ ನೀಡಿ ಔಟಾದರು. ಇದರಿಂದ ತಂಡಕ್ಕೆ ಭಾರೀ ನಿರಾಸೆಯಾಯಿತು. ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಸುಯೇಶ್ ಪ್ರಭುದೇಸಾಯಿ ಒಂದು ಸಿಕ್ಸ್ ಸಿಡಿಸಿದರು. 4 ಮತ್ತು 5ನೇ ಎಸೆತದಲ್ಲಿ ಕೇವಲ ಒಂದೊಂದು ರನ್ ಕದಿಯುವಷ್ಟಕ್ಕೆ ಸೀಮಿತವಾಗಿ ಆರ್ಸಿಬಿ ತಂಡ ಸೋಲು ಎದುರಿಸಬೇಕಾಯಿತು.