ವಾಷಿಂಗ್ಟನ್: ಎಂಜಾಯ್ ಮಾಡಬೇಕೆಂದು ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಜೀವನ ಪ್ರವಾಸದಲ್ಲಿಯೇ ಅಂತ್ಯವಾಗಿದೆ. ಅಮೆರಿಕದ ಈಕ್ವೆಡಾರ್ ಬೀಚ್ನಲ್ಲಿ ಮೂವರು ಯುವತಿಯರನ್ನು ಭೀಕರ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಡೆನಿಸ್ ರೆಯ್ನಾ (19) ಯುಲಿಯಾನಾ ಮಾಸಿಯಾಸ್ (21) ಹಾಗೂ ನಯೆಲಿ ತಫಿಯಾ (22) ಮೃತ ಯುವತಿಯರು. ಮೂವರು ಯುವತಿಯರು ಪ್ರವಾಸಕ್ಕೆಂದು ತೆರಳಿದ್ದು ಏಪ್ರಿಲ್ 4ರಂದು ನಾಪತ್ತೆಯಾಗಿ, ಏಪ್ರಿಲ್ 5 ರಂದು ಹತ್ಯೆಗೀಡಾಗಿದ್ದರು. ಆದ್ರೆ ಅದಕ್ಕೂ ಮುನ್ನ ತಮ್ಮ ಆಪ್ತರಿಗೆ ʻಇಲ್ಲೇನಾದರು ಘಟನೆ ಸಂಭವಿಸಬಹುದು ಅನ್ನಿಸುತ್ತಿದೆʼ ಅಂತಾ ಸಂದೇಶ ಕಳುಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಹತ್ಯೆಯಾವದರಲ್ಲಿ ಮಾಸಿಯಾಸ್ ಗಾಯಕಿಯಾಗಿದ್ದು, ನಯೆಲಿ ತಫಿಯಾ ತಾಯಿ ಹಾಗೂ ಡೆನಿಸ್ ರೆಯ್ನಾ ಕೃಷಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು. ಮಾಹಿತಿ ಪ್ರಕಾರ, ಇದೇ ಏಪ್ರಿಲ್ 5 ರಂದು ಮೂವರು ಯುವತಿಯರನ್ನ ಚಿತ್ರಹಿಂಸೆ ನೀಡಿ ಯಾರೋ ಹತ್ಯೆ ಮಾಡಿದ್ದಾರೆ. ನಂತರ ಈಕ್ವೆಡಾರ್ನ ಕ್ವಿನಿಂಡೆ ಬಳಿಯ ಎಸ್ಮೆರಾಲ್ಡಾಸ್ ನದಿಯ ಬಳಿ ಹೂತುಹಾಕಿದ್ದಾರೆ. ಈ ಸ್ಥಳದಲ್ಲಿ ನಾಯಿಯೊಂದು ದುರ್ವಾಸನೆ ಹೊರಬರುತ್ತಿರುವುದನ್ನು ಗುರುತಿಸಿದ್ದು, ಇದನ್ನು ಕಂಡ ಮೀನುಗಾರರ ಗುಂಪು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಾವಿಗೂ ಮುನ್ನ ಏಪ್ರಿಲ್ 4ರಂದು ತಫಿಯಾ ತನ್ನ ಸಹೋದರನಿಗೆ ತಾನಿರುವ ಲೈವ್ ಲೊಕೇಶನ್ ನೊಂದಿಗೆ ಸುಮ್ಮನೆ ಕಳುಹಿಸಿರುವುದಾಗಿ ವಾಟ್ಸಪ್ ಸಂದೇಶ ಕಳುಹಿಸಿದ್ದಾಳೆ. ಮೃತ ರೇನಾ ಸಹ ತಾನು ನಾಪತ್ತೆಯಾಗುವ ಗಂಟೆಗಳಿಗೂ ಮೊದಲು ತನ್ನ ಸ್ನೇಹಿತನಿಗೆ ʻಇಲ್ಲೇನೋ ಆಗಲಿದೆ ಅಂತಾ ಅನಿಸುತ್ತಿದೆ. ನನಗೆ ಏನಾದ್ರೂ ಸಂಭವಿಸಬಹುದು. ಆದ್ರೆ ನೆನಪಿರಲಿ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆʼ ಅಂತಾ ಸಂದೇಶ ಕಳುಹಿಸಿದ್ದಾಳೆ. ಇದು ಆಕೆಯ ಹತ್ಯೆಯ ನಂತರ ಬೆಳಕಿಗೆ ಬಂದಿದೆ.
ಅವರನ್ನ ಸಮಾಧಿ ಮಾಡಿ ಹೂತುಹಾಕುವುದಕ್ಕೂ ಮುನ್ನ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಅವರು ಮೃತಪಟ್ಟ ಸ್ಥಳದಲ್ಲಿ ಅವರ ಬೀಚ್ ಉಡುಪುಗಳು, ಸ್ನಾನದ ಸೂಟ್ಗಳು, ಲಘು ಉಡುಪುಗಳು, ಶಾರ್ಟ್ಸ್ಗಳನ್ನ ಕ್ವಿನಿಂಡೆ ಪೊಲೀಸರು ವಶಪಡಿಸಿಕೊಂಡಿದ್ದು ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.