ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಆರ್ಎಂವಿ ಬಡಾವಣೆಗೆ 1977ರಲ್ಲಿ ನೋಟಿಫೀಷನ್ ಮಾಡಲಾಗಿತ್ತು. ಬಿಡಿಎ ಅಧಿಕಾರಿಗಳ ವಿರೋಧದ ಮಧ್ಯೆ, 2010ರಲ್ಲಿ ಅಂದಿನ ಸಿಎಂ ಆಗಿದ್ದ ಬಿ ಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ 15 ಗುಂಟೆ ಅಕ್ರಮ ವಾಗಿ ಡಿ ನೋಟಿಫಿಕೇಶನ್ ಮಾಡಲಾಗಿತ್ತು. ನಂತರ ಮತ್ತೊಮ್ಮೆ 25 ಗುಂಟೆ ಜಮೀನು ಡಿನೋಟಿಫಿಷನ್ ಆರೋಪ ಕೇಳಿ ಬಂತು.
ಉದ್ಯಮಿಗಳಿಗೆ ಜೊತೆ ಸೇರಿ ಅಕ್ರಮ ಎಸಗಿರುವ ಆರೋಪ ಮಾಡಲಾಗಿದ್ದು, ಅಕ್ರಮ ಡಿನೋಟಿಫಿಕೇಷನ್ ನಿಂದ ಸರ್ಕಾರಕ್ಕೆ74 ಕೋಟಿ ರೂ ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪದ ಬಗ್ಗೆ ತನಿಖೆ ಮಾಡುವಂತೆ ದಾಖಲೆ ಸಮೇತ ಅಬ್ರಹಾಂ ದೂರು ನೀಡಿದ್ದು, ಬಿಎಸ್ ಯಡಿಯೂರಪ್ಪ ಜೊತೆಗೆ ಭೂ ಮಾಲೀಕರು ಹಾಗೂ ಬಿಲ್ಡರ್ ಗಳ ವಿರುದ್ಧವೂ ದೂರು ದಾಖಲಾಗಿದೆ. ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.