ಮಡಿಕೇರಿ: ಐಎನ್ಎಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ್ದೆನ್ನಲಾದ, ಕೊಡಗು ಜಿಲ್ಲೆಯಲ್ಲಿರುವ 11.04 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಜಾರಿ ನಿರ್ದೇಶನಾಲಯ, “ಕೊಡಗಿನಲ್ಲಿ ಕಾರ್ತಿಯವರು ಒಟ್ಟು ನಾಲ್ಕು ಆಸ್ತಿಗಳನ್ನು ಹೊಂದಿದ್ದು ಅವುಗಳಲ್ಲಿ ಒಂದು ಸ್ಥಿರಾಸ್ತಿಯಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ನ್ಯಾಯಾಲಯದಿಂದ ಜಪ್ತಿ ಆದೇಶವನ್ನು ತಂದು ಈ ಕ್ರಮ ಕೈಗೊಳ್ಳಲಾಗಿದೆ’’ ಎಂದು ಹೇಳಿದೆ.
ಐಎನ್ ಎಕ್ಸ್ ಮೀಡಿಯಾ ಪಿ. ಚಿದಂಬರಂ ವಿರುದ್ಧ ಕೇಂದ್ರದಲ್ಲಿ ಸಚಿವರಾಗಿದ್ದಾಗ, ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನಾ ಮಂಡಳಿ (ಎಫ್ಐಪಿಬಿ) ವತಿಯಿಂದ ಒಪ್ಪಿಗೆಯ ಪ್ರಮಾಣ ಪತ್ರ ಕೊಡಿಸಲು ಲಂಚ ಪಡೆದಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. ಆ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ.ಯು, ಚಿದಂಬರಂ ಅವರು ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಿಂದ ತಾವು ಕೋಟ್ಯಂತರ ರೂ. ಲಂಚವನ್ನು ನೇರವಾಗಿ ಪಡೆದಿಲ್ಲ. ಅದನ್ನು ಕಾರ್ತಿ ಚಿದಂಬರಂ ಅವರ ಹೆಸರಿನಲ್ಲಿ ಕೆಲವಾರು ನಕಲಿ ಕಂಪನಿಗಳನ್ನು ತೆರೆದು ಅವುಗಳಲ್ಲಿ ಹೂಡಿಕೆ ಮಾಡಿಸಲಾಗಿದ್ದು, ಆ ಕಂಪನಿಗಳ ಹೆಸರಿನಲ್ಲಿ ಆಸ್ತಿಪಾಸ್ತಿಗಳನ್ನು ಖರೀದಿ ಮಾಡಲಾಗಿದೆ. ಅವುಗಳಲ್ಲಿ ಕೊಡಗಿನಲ್ಲಿರುವ ಆಸ್ತಿಗಳೂ ಸೇರಿವೆ. ಇದುವರೆಗೆ, ಕಾರ್ತಿ ಚಿದಂಬರಂ ಅವರು ಅಡಗಿಸಿಟ್ಟಿದ್ದ 65.88 ಕೋಟಿ ರೂ.ಗಳ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ವಿವರಿಸಿದೆ.