ಬಳ್ಳಾರಿ: ಐದು ಸಲ ಶಾಸಕ, ಒಮ್ಮೆ ಸಂಸದರಾಗಿ ಆಯ್ಕೆ ಆಗಿರುವ ಬಿ.ಶ್ರೀರಾಮುಲು ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು, ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಅವರು ಮಾತ್ರವಲ್ಲದೆ ಅವರ ಪತ್ನಿ ಹಾಗೂ ಮಕ್ಕಳಿಬ್ಬರೂ ಕೋಟ್ಯಧಿಪತಿ ಎಂಬುದು ಈ ವೇಳೆ ಬಹಿರಂಗಗೊಂಡಿದೆ.
ಶ್ರೀರಾಮುಲು 47 ಕೋಟಿ ರೂ. ಒಡೆಯರಾಗಿದ್ದರೆ, ಅವರ ಪತ್ನಿ ಬಿ.ಭಾಗ್ಯಲಕ್ಷ್ಮಿ, ಮಕ್ಕಳಾದ ಬಿ.ದೀಕ್ಷಿತಾ, ಬಿ.ಧನುಶ್ ಕೂಡ ಕೋಟ್ಯಧಿಪತಿ. ರಾಮುಲು ಅವರ ಚರಾಸ್ತಿ 6.91 ಕೋಟಿ ರೂ., ಸ್ಥಿರಾಸ್ತಿ 39.65 ಕೋಟಿ ರೂ. ಆಗಿದ್ದು, ಪತ್ನಿ ಭಾಗ್ಯಲಕ್ಷ್ಮಿ ಹೆಸರಿನಲ್ಲಿ ಚರಾಸ್ತಿ 1.31 ಕೋಟಿ ರೂ. ಸ್ಥಿರಾಸ್ತಿ 20.29 ಕೋಟಿ ರೂ. ಇದೆ.
ಮಗಳು ದೀಕ್ಷಿತಾ 2.95 ಕೋಟಿ ರೂ., ಮಗ ಧನುಶ್ 1.30 ಕೋಟಿ ರೂ., ಮಗಳು 27.99 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. 1.20 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು, 75.26 ಲಕ್ಷ ರೂ. ಮೌಲ್ಯದ ಬೆಂಜ್ ಕಾರು, 38.81 ಲಕ್ಷ ರೂ. ಮೌಲ್ಯದ ಬಸ್ ಶ್ರೀರಾಮುಲು ಹೊಂದಿದ್ದಾರೆ.
ರಾಮುಲು 2.36 ಕೋಟಿ ರೂ. ಮೌಲ್ಯದ 4257 ಗ್ರಾಂ ಚಿನ್ನಾಭರಣ, 76 ಲಕ್ಷ ರೂ. ಮೌಲ್ಯದ 9500 ಗ್ರಾಂ, ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ. ಅವರ ಪತ್ನಿ 12.91 ಲಕ್ಷ ಮೌಲ್ಯದ ಚಿನ್ನಾಭರಣ, ಮಗಳು ದೀಕ್ಷಿತಾ 36.04 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ರಾಮುಲು 5.42 ಕೋಟಿ ರೂ. ಸಾಲ ಪಡೆದಿದ್ದಾರೆ. ಅವರು ನಗದು 5 ಲಕ್ಷ ರೂ. ಹೊಂದಿದ್ದು, ಅವರ ಪತ್ನಿ 2 ಲಕ್ಷ ರೂ., ಮಗಳು ದೀಕ್ಷಿತಾ 25 ಸಾವಿರ ರೂ., ಧನುಶ್ 50 ಸಾವಿರ ರೂ., ಅಂಕಿತಾ 20 ಸಾವಿರ ರೂ. ನಗದು ಹೊಂದಿದ್ದಾರೆ.