ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿರಲು ಎನ್ ಸಿಪಿಯ ಒಂದಷ್ಟು ಶಾಸಕರು ಬಯಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದು, ಇಂತಹ ಸುದ್ದಿಗಳನ್ನು ಆನಂದಿಸಿ ಎಂದು ಹೇಳಿದ್ದಾರೆ. ಇಂತಹ ಚರ್ಚೆಗಳು ಅಧಿಕಾರದ ಪಡಸಾಲೆಯಲ್ಲಿ ಸಹಜವಾಗಿರುವಂಥದ್ದಾಗಿದೆ. ಇಂತಹ ಸುದ್ದಿಗಳನ್ನು ಆನಂದಿಸಬೇಕು ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಠಾಕೂರ್ ತಿಳಿಸಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬಲಪಡಿಸುವ ಕೆಲಸದ ನಿಮಿತ್ತ ಅನುರಾಗ್ ಠಾಕೂರ್ ಮುಂಬೈ ಗೆ ಭೇಟಿ ನೀಡಿದ್ದಾಗ ಪತ್ರಕರ್ತರು ಎನ್ ಸಿಪಿಯಲ್ಲಿನ ಬೆಳವಣಿಗೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ಬಾರಿ ಜನರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ಭರವಸೆ ಇದೆ. ಪ್ರಧಾನಿ ಮೋದಿ ಹಲವು ಯೋಜನೆಗಳ ಮೂಲಕ ಬಡವರ ಸಬಲೀಕರಣ ಮಾಡಿದ್ದಾರೆ. ಬಡವರು, ಮಧ್ಯಮವರ್ಗದವರು ಹಾಗೂ ವ್ಯಾಪಾರಿಗಳ ಆಶೀರ್ವಾದ ಪ್ರಧಾನಿ ಮೋದಿ ಅವರ ಮೇಲಿರಲಿದೆ ಎಂದು ಠಾಕೂರ್ ಹೇಳಿದ್ದಾರೆ.