ಮಂಡ್ಯ : ಕಳೆದ 15 ವರ್ಷಗಳಿಂದ ಮದ್ದೂರು ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರು ಏಕ ವ್ಯಕ್ತಿಯ ಮುಷ್ಟಿಗೆ ಸಿಕ್ಕಿ ದಬ್ಬಾಳಿಕೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದರು ಆದರೆ, ಇನ್ಮುಂದೆ ಅದೆಲ್ಲ ನಡೆಯಲ್ಲ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಮದ್ದೂರು ತಾಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮದ್ದೂರು ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರು ಏಕ ವ್ಯಕ್ತಿಯ ಮುಷ್ಟಿಗೆ ಸಿಕ್ಕಿ ದಬ್ಬಾಳಿಕೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಯ ಕೃತ್ಯಕ್ಕೆ ವಿರುದ್ಧವಾಗಿ ಇಂದು ಸೆಟೆದು ನಿಂತಿರುವ ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸಿನಿಂದ ಸ್ವಯಂ ಪ್ರೇರಿತರಾಗಿ ಬಂದು ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಗೆಲುವಿನ ಸಂದೇಶವನ್ನು ವಿರೋಧ ಪಕ್ಷಗಳಿಗೆ ರವಾನಿಸಿದ್ದಾರೆ ಎಂದರು.
ಕ್ಷೇತ್ರದ ಜೆಡಿಎಸ್ ನಾಯಕರುಗಳು ಅಧಿಕಾರ ಹಿಡಿದು ಏಕ ಚಕ್ರಾಧಿಪತ್ಯ ಮೆರೆಯುತ್ತಿದ್ದರು. ಮದ್ದೂರು ಕ್ಷೇತ್ರದ ಜನರೇ ಇನ್ನು ಮುಂದೆ ಇಂತಹ ಆಟಗಳಿಗೆ ಚುನಾವಣೆ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ಪರೋಕ್ಷವಾಗಿ ಅಭ್ಯರ್ಥಿ ಕೆ.ಎಂ.ಉದಯ್ ಕುಟುಕಿದರು.
ವರದಿ : ಗಿರೀಶ್ ರಾಜ್ ಮಂಡ್ಯ