ಬೆಂಗಳೂರು: ಬೆಂಗಳೂರಿನ ಪದ್ಮನಾಭ ನಗರದಲ್ಲಿ ಯಾರೇ ನಿಂತರೂ ಬಿಜೆಪಿ ಗೆ ಚಿಂತೆಯಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು ಪದ್ಮನಾಭ ನಗರದಲ್ಲಿ ಸ್ಪರ್ಧೆಗೆ ಸಿದ್ಧ ಎಂಬ ಡಿ.ಕೆ. ಸುರೇಶ್ ಹೇಳಿಕೆಗೆ ಮಾತನಾಡಿದ ಸಚಿವರು, ಪದ್ಮನಾಭ ನಗರ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಡಿ.ಕೆ. ಸುರೇಶ್ ಸೇರಿದಂತೆ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು.
ಆದರೆ ಅದರಲ್ಲಿ ಯಶಸ್ಸು ಕಾಣಲಾರರು ಎಂದರು. ಇನ್ನೂ ಮೊದಲು ಕನಕಪುರದಲ್ಲಿ ಪ್ರಜಾಪ್ರಭುತ್ವ ಉಳಿಸಲು ಅವರು ಕೆಲಸ ಮಾಡಲಿ. ಘಟಾನುಘಟಿ ನಾಯಕರಿದ್ದರೂ ರಾಮನಗರವು ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಇದೆ. ಕನಕಪುರ ರಿಪಬ್ಲಿಕ್ನಲ್ಲಿ ಜನರು ಡಿ.ಕೆ. ಸಹೋದರರ ವರ್ತನೆಯಿಂದ ಬೇಸತ್ತಿದ್ದಾರೆ. ಅಲ್ಲಿ ಪ್ರಜಾಪ್ರಭುತ್ವ ಉಳಿಸಲೆಂದೇ ಪಕ್ಷವು ಹಿರಿಯ ನಾಯಕರಾದ ಆರ್. ಅಶೋಕ್ ಅವರನ್ನು ಕಣಕ್ಕೆ ಇಳಿಸಿದೆ. ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.